ಬೆಂಗಳೂರು: ನಗರದಲ್ಲಿ ಟೋಯಿಂಗ್ ಕಿರಿಕ್ ಇನ್ನೂ ನಿಂತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇಂದಿರಾನಗರದ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಡಿ ಹಿಂದೆ ಓಡಿ ಬಂದರೂ ಬಿಡದೇ ಟೋಯಿಂಗ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ವೀಕ್ಷಿಸಿದವರು ತರಹೇವಾರಿ ಕಾಮೆಂಟ್ಗಳೊಂದಿಗೆ ಶೇರ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಾವುದೇ ಅನೌನ್ಸ್ಮೆಂಟ್ ಮಾಡದೇ ನಗರದಲ್ಲಿ ದ್ವಿಚಕ್ರ ವಾಹನಗಳ ಟೋಯಿಂಗ್ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಬೈಕ್ ಎತ್ತಿಕೊಂಡು ಹೋಗುವಾಗ ಸವಾರ ಬಿಡಿಸಿಕೊಳ್ಳಲು ಓಡುತ್ತಿರುವ, ಬೈಕ್ ಸವಾರನ ಪರದಾಟದ ವಿಡಿಯೋವನ್ನು ಜನರ ವಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ ಸಾಕಷ್ಟು ಶೇರ್ ಮಾಡಲಾಗುತ್ತಿದೆ. ಟೋಯಿಂಗ್ ರೂಲ್ಸ್ಗೆ ಸಿಬ್ಬಂದಿ ಕಿಮ್ಮತ್ತು ನೀಡುತ್ತಿಲ್ಲ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ಮೊಮ್ಮಗಳ ಆತ್ಮಹತ್ಯೆ ಕೇಸ್: ಹೈಗ್ರೌಂಡ್ ಪೊಲೀಸರಿಂದ ಡಾ. ಸೌಂದರ್ಯ ಕೊಠಡಿ ಮಹಜರು
ಗಾಡಿ ತೆಗೆದುಕೊಳ್ಳುವ ಮುನ್ನ ಎರಡರಿಂದ ಮೂರು ಬಾರಿ ಮೈಕ್ನಲ್ಲಿ ಅನೌನ್ಸ್ ಮಾಡಬೇಕು. ಆದರೆ ಯಾವುದೇ ನಿಯಮ ಪಾಲಿಸುತ್ತಿಲ್ಲ. ಬಿಜೆಪಿ ಸರ್ಕಾರದಿಂದ ಅಮಾಯಕರ ಬದುಕು ಮೂರಾಬಟ್ಟೆ ಆಗುತ್ತಿದೆ. ತಮ್ಮಿಷ್ಟದಂತೆ ಟೋಯಿಂಗ್ ಮಾಡಿ ಬೇಕಾಬಿಟ್ಟಿ ದಂಡ ವಸೂಲಿ ಮಾಡುತ್ತಿದ್ದಾರೆ. ಟೋಯಿಂಗ್ ಸಿಬ್ಬಂದಿ ಬಾಯಿಗೆ ಬಂದಂತೆ ಬೈಯುತ್ತಾರೆ. ಎಲ್ಲ ಟೋಯಿಂಗ್ ವಾಹನದಲ್ಲಿ ರೌಡಿಗಳು ಸೇರಿದ್ದಾರೆ. ರಶೀದಿ ಕೂಡ ಹಾಕದೆ ಪೊಲೀಸರು ಹಣವನ್ನು ಜೇಬಿಗಿಳಿಸುತ್ತಾರೆ ಎಂಬುದು ಜನರ ದೂರಾಗಿದೆ. ಸರ್ಕಾರ ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ, ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಪೊಲೀಸರ ನಡೆಗೆ ಸೋಶಿಯಲ್ ಮಿಡಿಯಾದಲ್ಲಿ ಆಕ್ರೋಶ ಹೊರ ಹಾಕಲಾಗುತ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ