ಬೆಂಗಳೂರು: ಬೆಂಗಳೂರು ಸಚಿವರಲ್ಲಿ ನಾನು ಹಿರಿಯ. ಹೀಗಾಗಿ ನಗರ ಉಸ್ತುವಾರಿಗೆ ನನ್ನನೂ ಪರಿಗಣಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿರುವುದಾಗಿ ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಗೆ ಪೈಪೋಟಿ ವಿಚಾರ ಸಂಬಂಧ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸ್ಥಾನ ಅಥವಾ ವ್ಯಕ್ತಿ ಮುಖ್ಯವಲ್ಲ. ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಹೊಣೆ ವಿಭಾಗಿಸಿ ಇಬ್ಬರು ಉಸ್ತುವಾರಿಗಳನ್ನು ಮಾಡಲಿ. ನನಗರ್ಧ ಬೆಂಗಳೂರು, ಅಶೋಕ್‌ಗೆ ಅರ್ಧ ಬೆಂಗಳೂರು ಉಸ್ತಿವಾರಿ ಕೊಡಲಿ ಎಂದು ಸಲಹೆ ನೀಡಿದ್ದಾರೆ.
ನಗರ ಸಚಿವರಿಲ್ಲದೆ ಸಭೆ ನಡೆಸುವ ವಿಚಾರವಾಗಿ ಮಾತನಾಡಿದ ಸೋಮಣ್ಣ, ನಾನು ವಸತಿ ಯೋಜನೆ ಕುರಿತ ಸಭೆಗೆ ಆರ್.ಅಶೋಕ್ ಅವರನ್ನು ಕರೆದಿದ್ದೆ, ಆದರೆ ಅವರು ಬಂದಿರಲಿಲ್ಲ. ಇದು ಅವರಿಗೆ ನಷ್ಟ ಎಂದರು.
ಬೆಂಗಳೂರು ಸಚಿವರ ಮಧ್ಯೆ ನಗರ ಉಸ್ತುವಾರಿ ಪಟ್ಟಕ್ಕೆ ಮುಸುಕಿನ ಗುದ್ದಾಟದ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇಂದು ಸಚಿವ ವಿ.ಸೋಮಣ್ಣ ಹಾಗೂ ಆರ್. ಅಶೋಕ್ ನಡುವೆ ಆಗುತ್ತಿರುವ ಸ್ಪರ್ಧೆ ಬಗ್ಗೆ ಮಾತನಾಡಿ, ಬೆಂಗಳೂರಿಗೆ ಯಾರು ಉಸ್ತುವಾರಿ ಇಲ್ಲ, ಇದು ಕೇವಲ ತಾತ್ಕಾಲಿಕ ಎಂದು ಹೇಳಿದ್ದಾರೆ.
'ಐಟಿಯವರು ದಾಖಲೆ ಸಂಗ್ರಹಿಸಿ ದಾಳಿ'
ಐಟಿ ಸ್ವಾಯತ್ತ ಸಂಸ್ಥೆ. ಕೇವಲ ಕಾಂಗ್ರೆಸ್ ಮೇಲೆ ದಾಳಿ ಮಾಡುತ್ತಾರೆ ಎಂದು ಆ ಪಕ್ಷದವರು ಹೇಳುತ್ತಿದ್ದರು. ಈಗ ಏನ್ ಹೇಳ್ತಾರೆ ಅವರು? ಐಟಿಯವರು ದಾಖಲೆ ಸಂಗ್ರಹಿಸಿ ದಾಳಿ ಮಾಡಿದ್ದಾರೆ. ಯಾರೇ ತಪ್ಪು ಮಾಡಿದ್ರೂ ತಪ್ಪು ಅನ್ನುವ ಸಂದೇಶ ರವಾನೆ ಮಾಡಿದ್ದಾರೆ. ಐಟಿ ದಾಳಿ ಬಗ್ಗೆ ಯಡಿಯೂರಪ್ಪ ಈಗಾಗಲೇ ಸ್ಪಷ್ಟತೆ ಕೊಟ್ಟಿದಾರೆ. ನಾನು ಇನ್ನೇನು ಹೇಳಲಿ? ಕೇಂದ್ರದ ವ್ಯವಸ್ಥೆಯ ಇಲಾಖೆ ತನ್ನ ಕೆಲಸ ಮಾಡುತ್ತಿದೆ. ಯಾರು, ಯಾವ ಪಕ್ಷ ಅಂತ ಐಟಿ ನೋಡಲ್ಲ ಎಂದು ಸ್ಪಷ್ಟನೆ ನೀಡಿದರು.