ಬೆಂಗಳೂರು: ಗುರುವಾರ ಸಂಜೆ 'ಬೆಂಗಳೂರು ಹುಡುಗರು' ತಂಡ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿತು.
ಬೆಂಗಳೂರು ಹುಡುಗರು ತಂಡದ 'ಭಿಕ್ಷಾಟನೆ ಮುಕ್ತ ಭಾರತ ಚಳವಳಿ'ಯ ಮುಂದಾಳತ್ವ ವಹಿಸಿರುವ ವಿನೋದ್ ಕರ್ತವ್ಯ ರಾಜ್ಯಪಾಲರ ಭೇಟಿ ಬಗ್ಗೆ ಮಾತನಾಡಿ, ರಾಜ್ಯಪಾಲರು ನಾವು ನಡೆಸುತ್ತಿರುವ ಚಳವಳಿಯನ್ನು ಮೆಚ್ಚಿ ಪ್ರಶಂಸಿದ್ದಾರೆ ಎಂದರು.

ಭಿಕ್ಷೆ ಬೇಡುವುದು ಒಂದು ಕಾನೂನುಬಾಹಿರ ಚಟುವಟಿಕೆ. ಹಾಗಾಗಿ, ಸಾರ್ವಜನಿಕರು ಭಿಕ್ಷೆ/ಹಣ ಕೊಡಬಾರದು. ಕೊಟ್ಟರೆ ಅದು ಕಾನೂನುಬಾಹಿರ ಚಟುವಟಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸರ್ಕಾರ ಮತ್ತು ಆಡಳಿತವರ್ಗವು ಈಗಿರುವ ಕಾನೂನನ್ನು ಸರಿಯಾಗಿ ಪಾಲಿಸಿ ಕೆಲಸ ನಿರ್ವಹಿಸಿ ಇಂತಹ ಸಾಮಾಜಿಕ ಪಿಡುಗನ್ನು ನಿವಾರಿಸುವಲ್ಲಿ ಪ್ರಯತ್ನ ಮಾಡಬೇಕು ಎಂದು ರಾಜ್ಯಪಾಲರಿಗೆ ಮನವಿ ಪತ್ರದ ಮೂಲಕ ವಿವರಿಸಿದ್ದೇವೆ ಎಂದು ವಿನೋದ್ ಕರ್ತವ್ಯ ತಿಳಿಸಿದರು.
ಹಿನ್ನೆಲೆ ಏನು?:
ಭಿಕ್ಷುಕರಿಗೆ ನಗದು ರೂಪದಲ್ಲಿ ಭಿಕ್ಷೆ ಹಾಕುವುದನ್ನು ನಿಲ್ಲಿಸಿ. ಅವರಿಗೆ ಆಹಾರ ಮತ್ತು ನೀರು ನೀಡಿ. ಆದರೆ ಒಂದು ರೂಪಾಯಿಯನ್ನೂ ನೀಡಬೇಡಿ ಎಂದು ಚಳವಳಿ ಆರಂಭವಾಗಿತ್ತು. ಭಿಕ್ಷಾಟನೆಯನ್ನು ವಿರೋಧಿಸುವ ಚಳವಳಿ ಬೆಂಗಳೂರು ಹುಡುಗರು ತಂಡದಿಂದ ಪ್ರತಿ ಭಾನುವಾರ ನೆಡೆಯುತ್ತಿದೆ. ಪ್ರತಿ ಒಂದು ನಗರದಲ್ಲೂ, ಕಾನೂನು ಬಾಹಿರವಾಗಿ ಮೋಸ ಮಾಡುವ ಭಿಕ್ಷುಕರ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಹುಡುಗರು ತಂಡದಿಂದ ಅಭಿಯಾನ ಆರಂಭಗೊಂಡಿತ್ತು.
ಉದ್ದೇಶವೇನು?:
ಭಿಕ್ಷುಕರಾಗಿರಲಿ, ವ್ಯಕ್ತಿಯಾಗಿರಲಿ (ಮಹಿಳೆ/ಪುರುಷ/ವಯಸ್ಸಾದವರು/ಅಂಗವಿಕಲ/ಮಗು) ಭಿಕ್ಷೆ ಬೇಡುತ್ತಿದ್ದರೆ ನಾವು ಹಣಕ್ಕೆ ಬದಲಾಗಿ ಆಹಾರ-ನೀರು ನೀಡಬೇಕು. ಇದರ ಪರಿಣಾಮ ಅಂತರರಾಷ್ಟ್ರೀಯ / ರಾಷ್ಟ್ರೀಯ / ರಾಜ್ಯ ಮಟ್ಟದಲ್ಲಿ, ಭಿಕ್ಷುಕರ ಗ್ಯಾಂಗ್‌ಗಳು ಒಡೆಯುತ್ತವೆ. ಮಕ್ಕಳ, ಹೆಂಗಸರ ಹಾಗೂ ವೃದ್ಧರ ಅಪಹರಣ ನಿಲ್ಲುತ್ತದೆ. ಇಂತಹ ಗ್ಯಾಂಗ್‌ಗಳು ಅಪರಾಧ ಜಗತ್ತಿನಲ್ಲಿ ಕೊನೆಗೊಳ್ಳುತ್ತವೆ ಎನ್ನುವುದು ವಿನೋದ್ ಕರ್ತವ್ಯ ನೇತೃತ್ವದ ಅಭಿಯಾನ ಉದ್ದೇಶ.
ಸಾರ್ವಜನಿಕರಲ್ಲಿ ಮನವಿ:
ಈ ತಂಡ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರ ಹಿಡಿದು, ಬಿಸ್ಕೆಟ್ ಪ್ಯಾಕೆಟ್‌ಗಳು ಅಥವಾ ಏನಾದರೂ ಅವರಿಗೆ ತಿನ್ನುವ ಪದಾರ್ಥ ಅಥವಾ ಬಟ್ಟೆ ಕೊಡಿ. ಆದರೆ ಹಣವನ್ನು ಪಾವತಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
ಗಮನಿಸಬೇಕಾದ ಅಂಶವೆಂದರೆ, ಹೆಂಗಸರು ಮಕ್ಕಳನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಾರೆ. ಅ ಮಗು ಯಾವಾಗಲೂ ನಿದ್ದೆ ಮಾಡುತ್ತಿರುತ್ತದೆ. ಹಾಗೆಯೇ ಪುಟ್ಟ ಮಕ್ಕಳು ಪೆನ್, ಹೂ ಹಿಡಿದು ಭಿಕ್ಷೆ ಬೇಡುವುದು, ವೃದ್ಧರು ಇಯರ್ ಬಡ್ಸ್ ಹಿಡಿದು ಭಿಕ್ಷೆ ಬೇಡುವುದನ್ನು ನೋಡಿ ಯಾಕೆ ಇವರೆಲ್ಲರೂ ಇದೇ ಮಾರ್ಗ ಹಿಡಿದು ಭಿಕ್ಷೆ ಬೇಡುವುದು ಎನ್ನುವ ಪ್ರಶ್ನೆ ಎದ್ದಿತ್ತು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಮೈಕ್ ಹಿಡಿದು ಸರ್ಕಾರಿ ಯೋಜನೆಗಳ ಕುರಿತು ಗ್ರಾ.ಪಂ ಸದಸ್ಯನಿಂದ ಜನಜಾಗೃತಿ