ಬೆಂಗಳೂರು : 40 ವರ್ಷ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಇಸ್ಲಾಮಿಯಾ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಕಟ್ಟಡ ಸೇರಿದಂತೆ ಒಟ್ಟು 3.20 ಎಕರೆ ಭೂಮಿಯನ್ನು ಇಂದು ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ನೇತೃತ್ವದಲ್ಲಿ ಜಾರಿದಳದ ವಿಶೇಷ ಜಿಲ್ಲಾಧಿಕಾರಿ ದುರ್ಗಾಶ್ರೀ, ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಡಾ. ಶಿವಣ್ಣ, ತಹಶೀಲ್ದಾರ್ ರಾಮಲಕ್ಷ್ಮಯ್ಯ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬೆಂಗಳೂರು ದಕ್ಷಿಣ ತಾಲೂಕಿನ, ಬೇಗೂರು ಹೋಬಳಿಯ ಹುಳಿಮಾವು ಗ್ರಾಮದ ಸರ್ವೇ ನಂ. 63ರಲ್ಲಿದ್ದ ಸುಮಾರು 37.00 ಕೋಟಿ ರೂ.ಬೆಲೆ ಬಾಳುವ ಆಸ್ತಿಯನ್ನು ಸರ್ಕಾರದ ಸುಪರ್ದಿಗೆ ಪಡೆದಿದೆ.
ಅಕ್ರಮ ಒತ್ತುವರಿಯಲ್ಲಿ ಶಿಕ್ಷಣ ಸಂಸ್ಥೆ ನಡೆಸಿದ್ದಲ್ಲದೇ, ಸಂಸ್ಥೆಯು ಜಮೀನನ್ನು ಮಂಜೂರಾತಿಗೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿತ್ತು. ಸರ್ಕಾರ ಈ ಮನವಿಗಳನ್ನು 2010ರಲ್ಲಿಯೇ ತಿರಸ್ಕರಿಸಿದ್ದು, ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಲು ಸೂಚಿಸಿತ್ತು.
ನಂತರ ಸಂಸ್ಥೆಯ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದು, ಅವುಗಳನ್ನು ನ್ಯಾಯಾಲಯ ಕೂಡ ತಿರಸ್ಕರಿಸಿತ್ತು. ಹೀಗಾಗಿ, ಜಾರಿ ದಳದೊಂದಿಗೆ ಆಗಮಿಸಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.