ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗು ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರು, ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.
ಇದಕ್ಕೂ ಮೊದಲು ಸಂಜಯನಗರದ ರಾಧಾಕಷ್ಣ ದೇವಸ್ಥಾನಕ್ಕೆ ತೆರಳಿದ ಬಿಎಸ್‌ವೈ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿ ಬೃಹತ್ ಗಾತ್ರದ ಕೇಕ್ ಕತ್ತರಿಸಿದರು. ಇದೇ ವೇಳೆ ಅಭಿಮಾನಿ ಬಳಗದಿಂದ ರೈತರಿಗೆ ಉಚಿತ ಟ್ರ್ಯಾಕ್ಟರ್ಗಳನ್ನು ವಿತರಿಸಲಾಯಿತು.
ಶುಭ ಕೋರಿದ ಅಮಿತ್ ಶಾ: ಇಂದು ಬೆಳಗ್ಗೆ ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಹುಟ್ಟುಹಬ್ಬದ ಶುಭ ಕೋರಿದರು. ಪಕ್ಷಕ್ಕೆ ಉತ್ತಮ ಕೊಡುಗೆ ನೀಡಿದ್ದೀರಿ, ಇನ್ನಷ್ಟು ಸೇವೆಯ ಅಗತ್ಯವಿದೆ ಎಂದು ತಿಳಿಸಿದರು. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸಚಿವ ಸಂಪುಟ ಸದಸ್ಯರು ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಹಲವರು ಖುದ್ದಾಗಿ ಭೇಟಿ ನೀಡಿ ಶುಭಾಶಯ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಮಾ.12ರಿಂದ ಸ್ಪರ್ಧಾತ್ಮಕ ಪರೀಕ್ಷೆ: ನಾಳೆಯಿಂದ ಪ್ರವೇಶ ಪತ್ರ ಲಭ್ಯ
ಚೈತನ್ಯದ ಚಿಲುಮೆ: ಯಡಿಯೂರಪ್ಪ ಅಂದರೆ ಚೈತನ್ಯದ ಚಿಲುಮೆ ಅವರನ್ನು ನೋಡಿದರೆ ನಮಗೆ ನೂರು ಪಟ್ಟು ಶಕ್ತಿ ತುಂಬಿದಂತಾಗುತ್ತದೆ. ರಾಜ್ಯದಲ್ಲಿ ಮುಂದಿನ ಚುನಾವಣೆಗಳು ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಬೇಕು. ನಮ್ಮೆಲ್ಲರಿಗೆ ಶಕ್ತಿ ತುಂಬಲು ಅವರು ಮತ್ತೊಮ್ಮೆ ಜನತೆಯ ಸೇವೆ ಮಾಡುವಂತಾಗಬೇಕು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಆಶಿಸಿದರು.