ಬೆಂಗಳೂರು: ಅಧಿಕಾರಕ್ಕೆ ಬಂದ 15 ದಿನಗಳಲ್ಲೇ ಮಹದಾಯಿ ವಿವಾದಕ್ಕೆ ತೆರೆ ಎಳೆಯುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇದೀಗ ಮಹದಾಯಿ ಮರೆತು, ನೆರೆ ರಾಜ್ಯಕ್ಕೆ ನೀರು ಹರಿಸುವ ಭರವಸೆ ನೀಡಿ ರಾಜ್ಯದ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ.
ಕರ್ನಾಟಕದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ನೀರನ್ನು ಬೋರಾ ನದಿಗೆ ಹರಿಸಲು ಬಿಎಸ್ವೈ ಚಿಂತನೆ ನಡೆಸುವ ಕುರಿತು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಮಹದಾಯಿ ಹಾಗೂ ಕೃಷ್ಣಾ ನದಿ ನೀರು ಹಂಚಿಕೆ ವಿಚಾರದಲ್ಲಿ ಮಹಾರಾಷ್ಟ್ರ ಹಿಂದಿನಿಂದಲೂ ಕಿರಿಕ್ ಮಾಡಿದೆ. ಈಗ ಮಹಾರಾಷ್ಟ್ರಕ್ಕೆ ನೀರು ಕೊಡುವುದಾಗಿ ಆಶ್ವಾಸನೆ ಕೊಟ್ಟು, ಬಿಎಸ್ವೈ ಹೊಸ ಯಡವಟ್ಟು ಮಾಡಿಕೊಂಡಿದ್ದಾರೆ ಎಂದ ಆರೋಪ ಕೇಳಿ ಬಂದಿದೆ.
ಬಿಜೆಪಿ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದರೂ ಮಹದಾಯಿ ವಿವಾದ ಬಗೆಹರಿದಿಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಈಗಾಗಲೇ ಭುಗಿಲೆದ್ದಿರುವ ಕೃಷ್ಣಾ ನದಿ ನೀರು ಹಂಚಿಕೆ ಪ್ರಕರಣವೇ ಇತ್ಯರ್ಥವಾಗಿಲ್ಲ. ಹೀಗಿರುವಾಗ ವೋಟಿಗಾಗಿ ಅಲ್ಲಿನ ಜನರ ಓಲೈಕೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.