ಬೆಂಗಳೂರು: ಮೇಲ್ಮನೆ ತನ್ನ ಉದ್ದೇಶ ಮರೆತ ಮೇಲೆ ಅದು ಉಳಿಯಬೇಕಾ? ಅಂತ ಯೋಚಿಸಬೇಕಿದೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅಭಿಪ್ರಾಯಪಟ್ಟರು.
ವಿಧಾನಸಭೆಯಲ್ಲಿ ನಡೆದ ಸಂವಿಧಾನ ಮೇಲಿನ ವಿಶೇಷ ಚರ್ಚೆ ವೇಳೆ ಮಾತನಾಡಿದ ಅವರು, ಮೇಲ್ಮನೆ ಮೌಲ್ಯ ಕಳೆದುಕೊಂಡಿದೆ. ತನ್ನ ಸ್ಥಾನ, ಜವಾಬ್ದಾರಿಯನ್ನು ಮೇಲ್ಮನೆ ಮರೆತಿದೆ. ಮೇಲ್ಮನೆ ಈಗ ಹಿರಿಯರ ಮನೆಯಾಗಿ ಉಳಿದಿಲ್ಲ ಎಂದರು. ಆಗ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ವಿಧಾನಸಭೆಯಲ್ಲಿ ನಿಂತು ವಿಧಾನಪರಿಷತ್ ರದ್ದತಿ ಬಗ್ಗೆ ಮಾತಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಗ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ ಕೆಳಮನೆಯಿಂದಲೇ ಮೇಲ್ಮನೆ ರಚನೆಯಾಗಿದೆ. ಹಾಗಾಗಿ ಅದರ ಬಗ್ಗೆ ಪರಾಮರ್ಶೆ ಮಾಡಿದರೆ ತಪ್ಪೇನಿಲ್ಲ ಎಂದು ಎ.ಟಿ.ರಾಮಸ್ವಾಮಿಗೆ ಸಾಥ್ ನೀಡಿದರು. ಈ ವೇಳೆ ಮಧ್ಯೆ ಎದ್ದು ನಿಂತ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ತು ನೂರಕ್ಕೆ ನೂರು ವಿಫಲವಾಗಿಲ್ಲ. ಎಲ್ಲೋ ಒಂದು ಕಡೆ ವೈಫಲ್ಯ ಆಗಿರಬಹುದು. ಅದನ್ನು ಹೇಗೆ ದುರಸ್ತಿ ಮಾಡಬಹುದು ಎಂಬುದನ್ನು ಯೋಚಿಸೋಣ. ಅದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.