ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಂದ ಸೂಚನೆಯಿಂದ ಅಸಮಾಧಾನಗೊಂಡಿರುವ ಅಬಕಾರಿ ಸಚಿವ ಹೆಚ್.ನಾಗೇಶ್ ಮತ್ತು ಸಚಿವ ಸ್ಥಾನ ವಂಚಿತ ಮುನಿರತ್ನ ಅವರನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮಾಧಾನಪಡಿಸುವ ಕಸರತ್ತು ನಡೆಸಿದರು.
ಓದಿ: ಸಿಡಿನೂ ಇಲ್ಲ, ಪಾಡಿನೂ ಇಲ್ಲ.. ಯತ್ನಾಳ್ ಸುಮ್ನೆ ಹೇಳ್ತಾರೆ ಅಷ್ಟೇ ಎಂದ ಈಶ್ವರಪ್ಪ
ನಗರದ ಕೆಕೆ ಗೆಸ್ಟ್ ಹೌಸ್ನಲ್ಲಿ ಇಬ್ಬರು ಅಸಮಾಧಾನಿತರನ್ನ ಅರುಣ್ ಸಿಂಗ್ ಪ್ರತ್ಯೇಕವಾಗಿ ಮಾತನಾಡಿಸಿ ಮನವೊಲಿಸಿದರು. ಅಬಕಾರಿ ಸಚಿವ ನಾಗೇಶ್ರನ್ನು, ಅರುಣ್ ಸಿಂಗ್ ಬಳಿ ಆರೋಗ್ಯ ಸಚಿವ ಡಾ. ಸುಧಾಕರ್ ಕರೆದೊಯ್ದು ಭೇಟಿ ಮಾಡಿಸಿದರು. ನಂತರ ಮುನಿರತ್ನರನ್ನು ಡಿಸಿಎಂ ಡಾ. ಅಶ್ವತ್ಥ ನಾರಾಯಣ್ ಭೇಟಿ ಮಾಡಿಸಿದರು. ಇಬ್ಬರನ್ನೂ ಪ್ರತ್ಯೇಕವಾಗಿ ಕೂರಿಸಿಕೊಂಡು ಮಾತುಕತೆ ನಡೆಸಿದರು.
ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಪಕ್ಷದಲ್ಲಿ ಸಿಗಲಿದೆ ಎಂದು ಸಮಾಧಾನ ಮಾಡಿದ್ದಾರೆ. ಹೈಕಮಾಂಡ್ ಜೊತೆ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಭವಿಷ್ಯದಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಆಶ್ವಾಸನೆ ನೀಡಿದ್ದಾರೆ. ಅರುಣ್ ಸಿಂಗ್ ಜೊತೆ ನಡೆದ ಮಾತುಕತೆಯಿಂದ ಸಮಾಧಾನರಾದಂತೆ ಕಂಡುಬಂದರೂ ಅಸಮಾಧಾನ ಇನ್ನೂ ಮುನಿರತ್ನ ಮತ್ತು ನಾಗೇಶ್ ಮುಖದಲ್ಲಿ ಇರುವುದು ಸ್ಪಷ್ಟವಾಗಿದೆ.
ಮಾತುಕತೆ ನಡೆಸುವಂತೆ ಬಿಎಸ್ವೈಗೆ ಸೂಚನೆ:
ಸಚಿವ ಸ್ಥಾನ ವಂಚಿತಗೊಂಡು ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿರುವ ಶಾಸಕರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚನೆ ನೀಡಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಅರುಣ್ ಸಿಂಗ್, ಅಸಮಾಧಾನಿತರನ್ನು ಸಮಾಧಾನಪಡಿಸಿ. ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡು ಹೋಗಿ, ಶಾಸಕರ ಕೆಲಸಗಳನ್ನು ಕಡೆಗಣಿಸದೆ ಆದ್ಯತೆಯ ಮೇಲೆ ಪರಿಗಣಿಸಿ ಹಾಗೂ ಸಂಪುಟ ಸಹೋದ್ಯೋಗಿಗಳಿಗೂ ಇದನ್ನು ತಿಳಿಸಿ ಎಂದು ಸಲಹೆ ನೀಡಿದರು.
ದೆಹಲಿಗೆ ತೆರಳುವ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅರುಣ್ ಸಿಂಗ್, ಎಲ್ಲರಿಗೂ ಮಂತ್ರಿಯಾಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಬಿಜೆಪಿಯಲ್ಲಿ ಎಲ್ಲಾ ಶಾಸಕರಿಗೂ ಮಂತ್ರಿಯಾಗುವ ಅರ್ಹತೆ ಇದೆ. ಆದರೆ ಮಂತ್ರಿ ಸ್ಥಾನಕ್ಕೆ ನಿಗದಿತ ಮಿತಿ ಇದೆ. ಎಲ್ಲರಿಗೂ ಸಂಪುಟದಲ್ಲಿ ಸ್ಥಾನ ನೀಡಲು ಸಾಧ್ಯವಿಲ್ಲ. ಆದರೆ ಎಲ್ಲಾ ಶಾಸಕರಿಗೂ ಪಕ್ಷ ಗೌರವ ಕೊಡಲಿದೆ. ಶಾಸಕರು, ಸಚಿವರು, ಕಾರ್ಯಕರ್ತರಿಗೆ ಪಕ್ಷ ಗೌರವ ಕೊಡುತ್ತದೆ ಎಂದರು.
ಮುನಿರತ್ನ ಒಳ್ಳೆಯ ಮನುಷ್ಯ:
ಮುನಿರತ್ನಗೆ ಸಚಿವ ಸ್ಥಾನ ಏಕೆ ಕೊಟ್ಟಿಲ್ಲ ಎನ್ನುವುದು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಆದರೆ ಮುನಿರತ್ನ ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದಾರೆ. ಅವರ ಜೊತೆ ಮಾತನಾಡಲಾಗಿದೆ. ಸಚಿವ ಸ್ಥಾನ ಬೇಕೇಬೇಕು ಅಂತ ಮುನಿರತ್ನ ಪಟ್ಟು ಹಿಡಿದಿಲ್ಲ. ಮುನಿರತ್ನ ಒಳ್ಳೆಯ ಮನುಷ್ಯ ಎಂದರು.
ಯೋಗೇಶ್ವರ್ಗೆ ಅವಕಾಶ ಸಿಎಂ ನಿರ್ಧಾರ:
ಸಂಪುಟಕ್ಕೆ ಸಿ.ಪಿ.ಯೊಗೇಶ್ವರ್ ಅವರನ್ನು ತಗೆದುಕೊಂಡಿದ್ದಕ್ಕೆ ಶಾಸಕರ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ಅದು ಮುಖ್ಯಮಂತ್ರಿ ಯಡಿಯೂರಪ್ಪನವರ ನಿರ್ಧಾರ ಎಂದರು.