ಬೆಂಗಳೂರು: ನಾಡಿನ ಹಿರಿಯ ಕಲಾವಿದ, ಶಿಕ್ಷಕ ಜೆಎಂಎಸ್ ಮಣಿ ನಮ್ಮನಗಲಿದ್ದಾರೆ ಎಂಬುದನ್ನು ನಂಬಲಿಕ್ಕೆ ಆಗುವುದಿಲ್ಲ, ಅಗಲಿಕೆ ಕರ್ನಾಟಕ ಕಲಾವಲಯಕ್ಕೆ ಅಪಾರ ನಷ್ಟ. ಕಲಾವಿದ್ಯಾರ್ಥಿ ಹಾಗು ನಾಡಿನ ಕಲಾಕ್ಷೇತ್ರದ ನಡುವಿನ ಕೊಂಡಿಯಂತಿದ್ದ ಮಣಿ ಮೇಷ್ಟ್ರು ವಿದ್ಯಾರ್ಥಿಗಳನ್ನು ಶೇಷಾದ್ರಿಪುರಂ ರೈಲ್ವೆ ಸೇತುವೆ ಬಳಿ ಲ್ಯಾಂಡ್ ಸ್ಕೇಪ್ ಡೆಮೋ ಮಾಡಲು ಕರೆದುಕೊಂಡು ಹೋಗುತ್ತಾರೆ ಎನ್ನುವುದೇ ವಿದ್ಯಾರ್ಥಿಗಳಿಗೆ ಸಂಭ್ರಮದ ವಿಷಯವಾಗಿರುತ್ತಿತ್ತು. ಗುರು-ಶಿಷ್ಯರ ನಡುವಿನ ಅವಿನಾಭಾವ ಸಂಬಂಧದ ಧ್ಯೋತಕ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ: ಲಾಕ್‌ಡೌನ್ ಬರೆ: ತಿಂಗಳ ಕರುನಾಡ ಲಾಕ್ಡೌನ್ಗೆ ಹೆಚ್ಚಾಯಿತು ನಿರುದ್ಯೋಗ ಪ್ರಮಾಣ!
ಕೆನ್ ಕಲಾ ಶಾಲೆಯಲ್ಲಿ ಸೇವೆ ಸಲ್ಲಿಸುತ್ತ ನೂರಾರು ಕಲಾವಿದರನ್ನು ರೂಪಿಸಿದ ಮಣಿ ಅವರನ್ನು, ಈ ನಾಡು ಮರೆಯಲು ಸಾಧ್ಯವೇ ಇಲ್ಲ. ಕಲಾವಲಯಕ್ಕೆ ನಾಡಿಗೆ ನೀಡಿದ ಅಸಾಧರಣ ಸೇವೆ, ಕರ್ನಾಟಕ ಲಲಿತಕಲ ಅಕಾಡೆಮಿ ಬಹಳ ಶ್ರದ್ದೆಯಿಂದ ಸದಾ ಸ್ಮರಿಸುತ್ತದೆ. ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ನಾಡಿನ ಎಲ್ಲ ಕಲಾವಿದರ ಪರವಾಗಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತೇವೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಹೇಳಿದೆ.
ಜೆಎಂಎಸ್ ಮಣಿ ನಾಡು ಕಂಡ ಅದ್ಬುತ ಕಲಾವಿದರಲ್ಲಿ ಒಬ್ಬರು: ಸಚಿವ ಅರವಿಂದ ಲಿಂಬಾವಳಿ
ನಾಡಿನ ಸುಪ್ರಸಿದ್ಧ ಕಲಾವಿದ ಜೆಎಂಎಸ್ ಮಣಿ ನಿಧನಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಮಣಿ ಅವರು ಈ ನಾಡು ಕಂಡ ಅದ್ಭುತ ಕಲಾವಿದರಲ್ಲಿ ಒಬ್ಬರು. 1949ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ ಮಣಿ ಚಿತ್ರ ರಚನೆಯ ಬಗ್ಗೆ ಒಲವು ಬೆಳೆಸಿಕೊಂಡು ನಂತರ ವರ್ಣ ಚಿತ್ರಗಳ ಕಲಾವಿದರಾಗಿ ಹೆಸರು ಮಾಡಿದರು ಎಂದಿದ್ದಾರೆ.
ಚಿತ್ರ ರಚನೆಯ ಜೊತೆ ಕಲಿಸಿ ಕೊಡುವ ಗುರುವಾಗಿ ನಾಡಿನಾದ್ಯಂತ ಜನಪ್ರಿಯರಾದರು. ನಾಡಿನ ಪ್ರಸಿದ್ಧ ಕೆನ್ ಕಲಾ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಸಾವಿರಾರು ಕಲಾವಿದರನ್ನು ರೂಪಿಸಿದ ಕೀರ್ತಿ ಜೆಎಂಎಸ್ ಮಣಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಎರಡು ಬಾರಿ ಕರ್ನಾಟಕ ಲಲಿತಕಲಾ ಪ್ರಶಸ್ತಿ ಪುರಸ್ಕೃತರಾದ ಮಣಿ, ದೇಶಾದ್ಯಂತ ತಮ್ಮ ಕಲಾ ಪ್ರದರ್ಶನ ನಡೆಸಿದ್ದರು. ನ್ಯೂಯಾರ್ಕ್, ಲಂಡನ್, ಹಾಂಕಾಂಗ್ ಗಳಲ್ಲೂ ಚಿತ್ರಕಲಾ ಪ್ರದರ್ಶನಗಳು ಪಾಲ್ಗೊಂಡಿದ್ದರು. ಮಣಿ ಅಂತಹ ಅದ್ಭುತ ಕಲಾವಿದರ ನಿಧನ ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ಬಹುದೂಡ್ಡ ನಷ್ಟ ಉಂಟು ಮಾಡಿದೆ. ದೈಹಿಕ ಕಾಯ ದೂರವಾದರೂ ತಮ್ಮ ಕಲಾಕೃತಿಗಳ ಮೂಲಕ ನಮ್ಮೊಂದಿಗೆ ಸದಾ ಜೀವಂತವಾಗಿರುತ್ತಾರೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕುಟುಂಬ ವರ್ಗ ಮತ್ತು ಬಹುದೊಡ್ಡ ಶಿಷ್ಯವರ್ಗಕ್ಕೆ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.