ಕೆಆರ್ ಪುರ : ಪ್ರಚಾರಕ್ಕಾಗಿ ಲಸಿಕಾ ಕಾರ್ಯಕ್ರಮವನ್ನು ಮಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಸಚಿವ ಅರವಿಂದ ಲಿಂಬಾವಳಿ ಕಿಡಿಕಾರಿದರು. ಇತ್ತೀಚೆಗೆ ಕಾಂಗ್ರೆಸ್‌ನವರು ಬಿದರಹಳ್ಳಿ ಲಸಿಕೆ ನೀಡುವ ಕಾರ್ಯಕ್ರಮ ಮಾಡಿ ನಾಟಕ ಮಾಡಿ ಹೋದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಒಂದು ಕೋಟಿ ವ್ಯಾಕ್ಸಿನ್ ಜನಕ್ಕೆ ನೀಡಿದೆ. ಬಡವರಿಗೆ ಕಿಟ್ ನೀಡುವ ಕಾರ್ಯಕ್ರಮ ಮಾಡಿದ್ದೇವೆ, ಇದನ್ನು ತಿಳಿದುಕೊಳ್ಳಿ ಎಂದು ಹೇಳಿದರು. ಪ್ರಚಾರಕ್ಕಾಗಿ ದಯವಿಟ್ಟು ಕಾರ್ಯಕ್ರಮವನ್ನು ಮಾಡಬೇಡಿ, ಸೇವಾ ಮನೋಭಾವದಿಂದ ಕೆಲಸ ಮಾಡಿ.
ಇದರಿಂದ ಜನರು ಸ್ವಲ್ಪಮಟ್ಟಿಗಾದರೂ ನಿಮ್ಮನ್ನು ಸ್ಮರಿಸುತ್ತಾರೆ. ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು. ಬಿಜೆಪಿ ಸರ್ಕಾರದಲ್ಲಿ ಹಲವು ಶಾಸಕರು, ಸಚಿವರು ಸಾಕಷ್ಟು ಪ್ರಮಾಣದಲ್ಲಿ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಇದೇ ರೀತಿ ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ನ ಶಾಸಕರು ಸಹ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಒಳ್ಳೆಯ ಕೆಲಸವನ್ನು ಮಾಡಿ. ಸೇವಾ ಮನೋಭಾವದಿಂದ ಕೆಲಸ ಮಾಡಿ, ಪ್ರಚಾರಕ್ಕೋಸ್ಕರ ಕಾರ್ಯಕ್ರಮಗಳನ್ನು ಮಾಡಬೇಡಿ ಎಂದು ಮನವಿ ಮಾಡಿದರು.
ವ್ಯಾಕ್ಸಿನೇಷನ್ ಬಗ್ಗೆ ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದರು. ಈಗ ಅವರಿಗೆ ಮನವರಿಕೆಯಾಗಿ ಅವರು ಸಹಾ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ ಸಾವಿನ ಪ್ರಮಾಣ ಕಡಿಮೆ ಮಾಡಬಹುದು ಎಂದು ಸಾರ್ವಜನಿಕರಿಗೆ ಸೂಚಿಸಿದರು.
ಇನ್ನು, ನನ್ನ ಕ್ಷೇತ್ರದಲ್ಲಿ ನಾನು ಮತ್ತು ನಮ್ಮ ಮುಖಂಡರು ಸೇರಿ ಕೋವಿಡ್ನಿಂದ ಯಾರು ಸಾವನ್ನಪ್ಪಿದ್ದಾರೆ ಅಂತವರ ಮಕ್ಕಳ ವಿಧ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ಆ ಮಕ್ಕಳು ಎಷ್ಟರಮಟ್ಟಿಗೆ ವಿದ್ಯಾಭ್ಯಾಸ ಮಾಡಲು ಬಯಸುತ್ತಾರೋ ಅಲ್ಲಿಯವರೆಗೂ ಅವರ ವೆಚ್ಚವನ್ನು ಬರಿಸುವುದಾಗಿ ಹೇಳಿದರು.