ಬೆಂಗಳೂರು: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ದ.ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಹಾಗೂ ಇತರೆ 14 ಹಳ್ಳಿಗಳಿಗೆ ಜಲ ಜೀವನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 73.10 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಅದೇ ರೀತಿ ದ.ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಮೂಡುಬಿದಿರೆ ತಾಲೂಕಿನ 39 ಹಳ್ಳಿಗಳಿಗೆ ಜಲ ಜೀವನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 145.48 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆಯಿತು.
ಇನ್ನು ಜಲಜೀವನ್ ಮಿಷನ್ ಅಡಿ ಯಾದಗಿರಿ ಜಿಲ್ಲೆಯ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ಹಾಗೂ 3 ನಗರ ಸ್ಥಳೀಯಗಳಾದ ಕಕ್ಕೆರಾ, ಕೆಂಭಾವಿ ಮತ್ತು ಹುಣಸಗಿ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 1358.62 ಕೋಟಿ ರೂ. ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಸಂಪುಟ ತೀರ್ಮಾನಗಳೇನು?
- ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟ್ಟ ಬಸವಣ್ಣ ನೀರು ಸರಬರಾಜು ಯೋಜನೆಯ 990 ಕೋಟಿ ರೂ. ಮೊತ್ತದ ಡಿಪಿಆರ್ ಗೆ ಘಟನೋತ್ತರ ಅನುಮೋದನೆ
- ಕೋವಿಡ್ ಮೂರನೇ ಅಲೆ ಎದುರಿಸಲು 317 ಕೋಟಿ ರೂ. ಮೊತ್ತದಲ್ಲಿ ವೈದ್ಯಕೀಯ ಉಪಕರಣ, ಪರಿಕರಗಳ ಖರೀದಿ ಆದೇಶಕ್ಕೆ ಘಟನೋತ್ತರ ಅನುಮೋದನೆ
- ಬೆಳಗಾವಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ 990 ಕೋಟಿ ರೂ. ಮೊತ್ತಕ್ಕೆ ಒಪ್ಪಿಗೆ
- ರಾಜ್ಯದ ಅಣೆಕಟ್ಟುಗಳ ಸಂರಕ್ಷಣೆಗೆ ಪ್ರತ್ಯೇಕ ಸಂಸ್ಥೆ ಸ್ಥಾಪಿಸುವ ಬಗ್ಗೆ ತೀರ್ಮಾನ
- ಆರ್ಎಸ್ಎಸ್ ಅಂಗ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್ಗೆ ಬೆಂಗಳೂರಿನ ಹೆಸರಘಟ್ಟ ಬಳಿಯ ಹುರಳಿಚಿಕ್ಕನಹಳ್ಳಿ ಬಳಿ 9.32 ಎಕರೆ ಭೂಮಿ ನೀಡುವ ಬಗ್ಗೆ ತೀರ್ಮಾನ
- ಕೃಷಿ ಇಲಾಖೆಯಿಂದ ಸಂಚಾರಿ ಆರೋಗ್ಯ ಸಸ್ಯ ವಾಹನಗಳ ಖರೀದಿಗೆ 41 ಕೋಟಿ ಅಂದಾಜು ಮೊತ್ತಕ್ಕೆ ಒಪ್ಪಿಗೆ
- ನಬಾರ್ಡ್ ಪ್ರಾಯೋಜಿತ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ 79 ಕೋಟಿ ರೂ. ಸಿವಿಲ್ ಕಾಮಗಾರಿಗೆ ಒಪ್ಪಿಗೆ
- ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಯಿಂದ 2022 ರ ಸಾರ್ವತ್ರಿಕ ರಜೆ ಮತ್ತು ಪರಿಮಿತ ರಜೆಗಳ ಘೋಷಣೆಗೆ ಅಸ್ತು