ಬೆಂಗಳೂರು: ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಕ್ಷೇತ್ರಗಳ ಪುನರ್ವಿಂಗಡನೆ ಸಂಬಂಧ ಮಹತ್ವದ 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇೆಯಕ 2021 ವಿಧಾನಸಭೆಯಲ್ಲಿ ಅಂಗೀಕೃತಗೊಂಡಿತು. ಕಾಂಗ್ರೆಸ್ ಸದಸ್ಯರ ವಿರೋಧ, ಸಭಾತ್ಯಾಗದ ಮಧ್ಯೆಯೇ ವಿಧೇಯಕ ಅಂಗೀಕಾರವಾಯಿತು.
ಇದಕ್ಕೂ ಮುನ್ನ ವಿಧೇಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ಚುನಾವಣೆ ಮುಂದೂಡುವ ಉದ್ದೇಶದಿಂದ ತರಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಮೀಸಲಾತಿ ವಿರುದ್ಧವಾಗಿದೆ. ಈ ತಿದ್ದುಪಡಿ ದುರುದ್ದೇಶದಿಂದ ಕೂಡಿದೆ. ಇದೊಂದು ಸಂವಿಧಾನ ವಿರೋಧಿ ಹಾಗೂ ಕರಾಳ ವಿಧೇಯಕ. ಇದಕ್ಕೆ ನಮ್ಮ ವಿರೋಧ ಇದೆ. ವಿಧೇಯಕ ವಿರೋಧಿಸಿ ಸಭಾತ್ಯಾಗ ಮಾಡುತ್ತೇವೆ ಎಂದು ಕಲಾಪ ಸಭಾತ್ಯಾಗ ಮಾಡಿದರು.
ಈ ವಿಧೇಯಕದ ಮೂಲ ಉದ್ದೇಶ ಕರ್ನಾಟಕ ಪಂಚಾಯತ್ ರಾಜ್ ಕ್ಷೇತ್ರ ಪುನರ್ವಿಂಗಡನೆ ಆಯೋಗ (ಡಿಲಿಮಿಟೇಷನ್ ಕಮಿಷನ್) ರಚಿಸುವುದಾಗಿದೆ. ಈ ಆಯೋಗದ ಮೂಲಕ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ಪುನರ್ವಿಂಗಡನೆ ಮಾಡಲಾಗುತ್ತದೆ.
ಈ ಹಿಂದೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಮಾಡಿದ ತಾ.ಪಂ ಹಾಗೂ ಜಿ.ಪಂ ಸೀಮಾ ನಿರ್ಣಯ (ಕ್ಷೇತ್ರ ಪುನರ್ವಿಂಗಡನೆ) ಅವೈಜ್ಞಾನಿಕ ಹಾಗೂ ಕಾನೂನು ಬಾಹಿರವಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್ ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚನೆಗಾಗಿ ವಿಧೇಯಕವನ್ನು ತರಲಾಗಿದೆ.
ಈ ವಿಧೇಯಕ ಜಾರಿಯಾದ ತಕ್ಷಣ ತಾಲೂಕು ಪಂ. ಹಾಗೂ ಜಿ.ಪಂ. ಕ್ಷೇತ್ರಗಳ ಎಲ್ಲಾ ಕ್ಷೇತ್ರ ಪುನರ್ವಿಂಗಡನೆ ಅಧಿಸೂಚನೆ ರದ್ದಾಗಲಿದೆ. ಜತೆಗೆ ಪ್ರಸ್ತುತವಿರುವ ಕ್ಷೇತ್ರ ಪುನರ್ವಿಂಗಡನೆ ಆಧಾರದಲ್ಲಿ ಜಾರಿಯಲ್ಲಿರುವ ತಾ.ಪಂ ಹಾಗೂ ಜಿ.ಪಂ. ಕ್ಷೇತ್ರಗಳ ಮೀಸಲಿರಿಸುವ ಎಲ್ಲಾ ಅಧಿಸೂಚನೆಗಳನ್ನು ಕೂಡಲೇ ರದ್ದಾಗಲಿದೆ.
ಆಯೋಗದ ಕಾರ್ಯ ವೈಖರಿ ಏನು?:
- ಜನಗಣತಿ ಆಧಾರದಲ್ಲಿ ಪ್ರತಿ ಗ್ರಾ.ಪಂ, ತಾ.ಪಂ, ಮತ್ತು ಜಿ.ಪಂಚಾಯತಿಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲು ಶಿಫಾರಸು ಮಾಡುವುದು.
- ಜನಗಣತಿ ಆಧಾರದಲ್ಲಿ ಪ್ರತಿ ಗ್ರಾ.ಪಂ, ತಾ.ಪಂ., ಮತ್ತು ಜಿ.ಪಂಚಾಯತಿ ಪ್ರದೇಶವನ್ನು ಆಯಾ ಗ್ರಾಮ ಪಂ. ಅಥವಾ ತಾ.ಪಂ. ಅಥವಾ ಜಿ.ಪಂ. ಚುನಾಯಿಸಲು ಅಗತ್ಯವಾದ ಸದಸ್ಯರ ಸಂಖ್ಯೆಯನದನು ಒಟ್ಟು ಸದಸ್ಯರ ಸಂಖ್ಯೆಯನ್ನು ವಾರ್ಡುಗಳು ಅಥವಾ ಕ್ಷೇತ್ರಗಳನ್ನಾಗಿ ವಿಂಗಡಿಸಲು ಶಿಫಾರಸು ಮಾಡುವುದು
- ಪ್ರತಿ ಗ್ರಾ.ಪಂ, ತಾ.ಪಂ., ಮತ್ತು ಜಿ.ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿಯ ವಾರ್ಡುಗಳು ಅಥವಾ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವುದಕ್ಕಾಗಿ ಶಿಫಾರಸು ಮಾಡುವುದು
ಕಾಂಗ್ರೆಸ್ ಸದಸ್ಯರ ವಿರೋಧ:
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ವಿಧೇಯಕ ತಿದ್ದುಪಡಿ ಸಂಬಂಧ ಚರ್ಚೆ ನಡೆಸಿದ ಶಾಸಕ ಕೃಷ್ಣ ಬೈರೇಗೌಡ, ಈ ತಿದ್ದುಪಡಿ ಸಂವಿಧಾನ ವಿರೋಧಿ ತಿದ್ದುಪಡಿಯಾಗಿದೆ. ಅಧಿಕಾರ ವಿಕೇಂದ್ರೀಕರಣದಲ್ಲಿ ಕರ್ನಾಟಕ ಮೇಲುಪಂಕ್ತಿ ಹಾಕಿದ್ದೇವೆ. ಈಗಿರುವ ಕ್ಷೇತ್ರ ಮರುವಿಂಗಡನೆ ನ್ಯೂನತೆಯಿಂದ ಕೂಡಿದ್ದು, ಅದಕ್ಕಾಗಿ ಈ ವಿಧೇಯಕ ತರುತ್ತಿದ್ದೀರಿ.
ಆದರೆ ಕ್ಷೇತ್ರ ಮರುವಿಂಗಡನೆ ಮಾಡಿದ್ದಲ್ಲ, ಚುನಾವಣಾ ಆಯೋಗ ಮಾಡಿದ್ದಲ್ಲ. ಅದಕ್ಕೆ ನಿಯಮಾವಳಿ ರೂಪಿಸಿದ್ದು ಸರ್ಕಾರ. ಅದಕ್ಕೆ ಸಂಪುಟ ಸಭೆಯ ಅನುಮೋದಿತ ನಿಯಮದ ಪ್ರಕಾರ ಕ್ಷೇತ್ರ ಮರುವಿಂಗಡನೆ ಮಾಡಿದ್ದೀರಾ? ಎಂದು ಪ್ರಶ್ನಿಸಿದರು.
ಜೆಡಿಎಸ್ ಸದಸ್ಯರಿಂದಲೂ ಆಕ್ಷೇಪ:
ವಿಧೇಯಕ ಬಗ್ಗೆ ಜೆಡಿಎಸ್ ಸದಸ್ಯರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿವಲಿಂಗೇಗೌಡರು ಮಾತನಾಡುತ್ತಾ, ಡಿಲಿಮಿಟೇಷನ್ ಘೋಷಿಸಿ ಆರು ತಿಂಗಳು ಆಗಿದೆಯಲ್ಲ. ಆಗ ತಪ್ಪು ಗೊತ್ತಾಗಿಲ್ವಾ?. ಆಯೋಗವನ್ನು ಮಾಡಿ ಆದರೆ ಅದನ್ನು ರಾಜಕೀಯ ಉದ್ದೇಶಕ್ಕೆ ಬಳಸಬೇಡಿ ಎಂದು ಆಗ್ರಹಿಸಿದರು.