ಬೆಂಗಳೂರು: ಅವನತಿ ಅಂಚಿಗೆ ತಲುಪಿದ್ದ ಬೆಂಗಳೂರಿನ ದೊಡ್ಡ ಕೆರೆಗಳಲ್ಲಿ ಒಂದಾದ ಕಲ್ಕೆರೆಯ ಕೆರೆ ಬಿಬಿಎಂಪಿ ಕಾಯಕಲ್ಪದಿಂದ ನಳನಳಿಸುತ್ತಿದ್ದು, ಲಕ್ಷಾಂತರ ಜಲಚರಗಳು, ಪಕ್ಷಿಗಳು ಸೇರಿದಂತೆ ಜೀವ ಸಂಕುಲಕ್ಕೆ ಆಸರೆಯಾಗಿದೆ.
ಸ್ಥಳೀಯ ಹೋರಾಟದ ಫಲವಾಗಿ ಐದು ವರ್ಷಗಳ ಹಿಂದೆ ಬಿಬಿಎಂಪಿ ಈ ಕೆರೆಯನ್ನು ಪುನಶ್ಚೇತನಗೊಳಿಸಲು ಮುಂದಾಗಿತ್ತು. ಕೊಳಚೆ ಗುಂಡಿಯಾಗಿದ್ದ ಕೆರೆಯಲ್ಲಿ ಹಂತ ಹಂತವಾಗಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಿದ್ದು, ಈಗ ಶುದ್ಧ ನೀರಿನಿಂದ ನಳನಳಿಸುತ್ತಿದೆ. ಕೆರೆಯ ಮಧ್ಯಭಾಗದಲ್ಲಿ ಎರಡು ನಡುಗಡ್ಡೆ ನಿರ್ಮಿಸಲಾಗಿದೆ. ವಿದೇಶಿ ಪಕ್ಷಿಗಳ ಕಲರವ ಕಂಡು ವಾಯು ವಿಹಾರಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.
180 ಎಕರೆ ವಿಸ್ತೀರ್ಣ ಇರುವ ಕಲ್ಕೆರೆ ಪುನಶ್ಚೇತನಕ್ಕೆ 22 ಕೋಟಿ ರೂ. ವೆಚ್ಚಮಾಡಲಾಗಿದ್ದು, ಕೆರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ವಾಯು ವಿಹಾರ ಮಾಡಲು 5ಕಿ.ಮೀ ವಾಕಿಂಗ್ ಟ್ರಾಕ್ ನಿರ್ಮಿಸಲಾಗಿದೆ. ಕೆರೆ ಸೇರುತ್ತಿದ್ದ ಕೊಳಚೆ ನೀರು ತಡೆಯಲು ಅದಕ್ಕೆ ಬೇರೆ ಮಾರ್ಗ ಮಾಡಿರುವುದರಿಂದ ಕ್ಯಾಲಸನಹಳ್ಳಿ, ಕಲ್ಕೆರೆ, ಬಿಳಿ ಶಿವಾಲೆ ಗ್ರಾಮದ ರೈತರಿಗೆ ಈ ಕೆರೆಯ ನೀರನ್ನು ಕೃಷಿಗೆ ಬಳಸಲು ಯೋಗ್ಯವಾಗಿದೆ. ಮಕ್ಕಳ ಅಟಿಕೆ ಸಾಮಗ್ರಿಗಳು ಹಾಗೂ ಬೋಟಿಂಗ್ ಸೌಲಭ್ಯಗಳನ್ನು ಕಲ್ಪಿಸಿದರೇ ಇನ್ನಷ್ಟು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಕೆರೆಯಲ್ಲಿ ಐದು ವರ್ಷದ ಹಿಂದೆ ಜಂಬು ನಾರು, ಆಳೆತ್ತರದ ಗಿಡಗಂಟೆಗಳು ಬೆಳೆದು ಅಳಿವಿನ ಅಂಚಿಗೆ ತಲುಪಿತ್ತು. ನಗರದ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯಗಳು ಈ ಕೆರೆಗೆ ಸೇರಿ ನೀರು ಸಂಪೂರ್ಣ ಕಲುಷಿತಗೊಂಡಿತ್ತು. ಅಲ್ಲದೇ ಲಕ್ಷಾಂತರ ಜಲಚರಗಳು ಸಾನಪ್ಪಿದ್ದವು. ಆದರೆ, ಇದೀಗ ಶುದ್ಧ ನೀರಿನಿಂದ ಕಂಗೊಳಿಸುತ್ತಿರುವ ಕೆರೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.