ಬೆಂಗಳೂರು: ಹಲವಾರು ರೈತರು ಇಂದಿಗೂ ಮಳೆಯನ್ನೇ ಆಶ್ರಯಿಸಿಕೊಂಡು ಜಮೀನು ಕಾರ್ಯದಲ್ಲಿ ತೊಡಗಿದ್ದಾರೆ. ಕಾರಣ ಅವರಲ್ಲಿ ಕೊಳವೆ ಬಾವಿ ತೋಡಿಸುವಷ್ಟು ಆರ್ಥಿಕ ಶಕ್ತಿ ಇಲ್ಲದಿರುವುದು. ಈ ಕಾರಣಕ್ಕೆ ಸರ್ಕಾರವೇ ಉಚಿತವಾಗಿ ಈ ಸೌಲಭ್ಯಗಳನ್ನು ರೈತರಿಗೆ ನೀಡುತ್ತಿದೆ. ನೀವು ಸದುಪಯೋಗಪಡಿಸಿಕೊಳ್ಳಿ.
ಯೋಜನೆ ಏನು? : ಕೊಳವೆ ಬಾವಿ (ಬೋರ್ ವೆಲ್) ಕೊರೆಯುವ ಮತ್ತು ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆ. ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್ ಮತ್ತು ಮೋಟಾರ್ ಮೂಲಕ ನೀರೆತ್ತುವುದು ಈ ಯೋಜನೆಯ ಉದ್ದೇಶ.
ಪ್ರಮುಖವಾಗಿ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಗಂಗಾ ಕಲ್ಯಾಣ ಯೋಜನೆ ತಂದಿದೆ. ಉಚಿತವಾಗಿ ಕೊಳವೆ ಬಾವಿ (ಬೊರ್ ವೆಲ್ )/ ತೆರೆದ ಬಾವಿ ನಿರ್ಮಾಣಕ್ಕೆ ಈ ಯೋಜನೆಯಡಿ ಧನ ಸಹಾಯ ಪಡೆಯಬಹುದು. ಇದಕ್ಕೆ ಬಜೆಟ್ನಲ್ಲಿ ಬಿಡುಗಡೆಯಾದ ಅನುದಾನದ ಆಧಾರದ ಮೇಲೆ ಗಂಗಾ ಕಲ್ಯಾಣ ಯೋಜನೆಗೆ ಹಣ ಬಿಡುಗಡೆ ಆಗಲಿದೆ.
ಅನ್ವಯವಾಗುವ ಜಿಲ್ಲೆಗಳ್ಯಾವುವು, ಸಹಾಯಧನವೆಷ್ಟು? : ಅಂತರ್ಜಲ ಕಡಿಮೆಯಾಗಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ ಜಿಲ್ಲೆಗಳಿಗೆ ಈ ಯೋಜನೆ ಅನ್ವಯವಾಗುತ್ತದೆ. ಈ ಯೋಜನೆಯಡಿ ಘಟಕದ ವೆಚ್ಚವನ್ನು ನಾಲ್ಕು ಲಕ್ಷ ರೂ. ಗಳಿಗೆ ನಿಗದಿಪಡಿಸಲಾಗಿದೆ.
ಮೂರುವರೆ ಲಕ್ಷ ಸಹಾಯಧನ ಸಿಗಲಿದೆ. ಬಾಕಿ 50 ಸಾವಿರ ರೂ.ಗಳನ್ನು ಶೇ.4 ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ. ಇತರ ಜಿಲ್ಲೆಗಳ ರೈತರಿಗೆ 2 ಲಕ್ಷ ಸಹಾಯಧನವಿದ್ದು, 50 ಸಾವಿರ ರೂ.ಗಳನ್ನು ವಾರ್ಷಿಕ ಶೇ. 4 ರ ಬಡ್ಡಿಯಂತೆ ಸಾಲ ತೀರಿಸಬೇಕಾಗುತ್ತದೆ.
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಕರೆಯುವ ನಿಗಮಗಳ್ಯಾವುವು: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬಾಬು ಜಗಜೀವನರಾಮ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ, ಬೋವಿ ಸಮುದಾಯದ ಅಭಿವೃದ್ಧಿ ನಿಗಮ.
ಯೋಜನೆ ಪಡೆಯುವ ಅರ್ಹರು ಯಾರು? : ಪ್ರವರ್ಗ 1,2ಎ,3ಎ,3ಬಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಾಗಿಬೇಕು. ಕನಿಷ್ಠ 1.20 ಎಕರೆ, ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು. ಅರ್ಜಿದಾರರು ಯಾವುದೇ ಸರ್ಕಾರಿ ಹುದ್ದೆಯಲ್ಲಿ ಇರಬಾರದು. ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
ಠೇವಣಿ ಎಷ್ಟು : ಕೊಳವೆ ಬಾವಿ ಕೊರೆಸಲು ವೈಯಕ್ತಿಕವಾಗಿ ಪಾವತಿಸಬೇಕಾದ ಠೇವಣಿ ಈ ಕೆಳಕಂಡಂತೆ ಇದೆ. ನೋಂದಣಿ ಶುಲ್ಕ 50 ರೂ., ಜೊತೆಗೆ ಶೇ.18 ರಷ್ಟು ಜಿಎಸ್ ಟಿ. ಭದ್ರತಾ ಠೇವಣಿ ಶುಲ್ಕ 1290 ರೂ., 1 ಎಚ್ ಪಿಗೆ. ಮೀಟರ್ ಸುರಕ್ಷಾ ಠೇವಣಿ 3 ಸಾವಿರ ರೂ., ಮೀಟರ್ ಬಾಕ್ಸ್ 2100 ರೂ. ಮೇಲ್ವಿಚಾರಣಾ ಶುಲ್ಕ 150 ರೂ. ಜೊತೆಗೆ ಜಿಎಸ್ ಟಿ ಶೇ. 18 ರೂ.
ಬೇಕಿರುವ ದಾಖಲೆ ಏನು? : ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಫಲಾನುಭವಿಗಳ ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್, ಹೊಲದ ದಾಖಲೆ, ಜಾತಿ-ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಕಡ್ಡಾಯವಾಗಿದೆ.
ನಿಯಮವೇನು? : ಜಿಲ್ಲಾ ವ್ಯವಸ್ಥಾಪಕರು ಜಾಹೀರಾತು ನೀಡಿ ಆನ್ಲೈನ್ ಮೂಲಕ ಪ್ರತಿ ಜಿಲ್ಲೆಯಲ್ಲಿ ಅರ್ಜಿ ಆಹ್ವಾನಿಸುತ್ತಾರೆ. ದಾಖಲಾತಿಗಳೊಂದಿಗೆ ಆನ್ ಲೈನ್ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಶಾಸಕರ ನೇತೃತ್ವದ ತಾಲೂಕು ಸಮಿತಿಗೆ ವರ್ಗಾಯಿಸುತ್ತಾರೆ.
ನಂತರ ಸಮಿತಿಯು ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆ ಕಳುಹಿಸುತ್ತದೆ. ಈ ಸಂಬಂಧ ಗಂಗಾ ಕಲ್ಯಾಣ ಯೋಜನೆಯ ವಿವರಗಳನ್ನು ಲಿಂಕ್ ಕ್ಲಿಕ್ ಮಾಡಿ ನಲ್ಲಿ ಪಡೆಯಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ರೈತರು ಬೋರ್ ವೆಲ್ ಕೊರೆಸಿದ ನಂತರ ಸಂಬಂಧಪಟ್ಟ ವಿದ್ಯುತ್ ವಿತರಣಾ ಕಂಪನಿ ವ್ಯಾಪ್ತಿಯಲ್ಲಿ ಈಗಾಗಲೇ ದಾಖಲಿಸಿರುವ ಅರ್ಜಿಯ ಜೊತೆಗೆ ಸರ್ಕಾರ ನಿಗದಿಪಡಿಸಿದ 50 ಸಾವಿರ ರೂಪಾಯಿ ಠೇವಣಿ ಸಂದಾಯ ಮಾಡಬೇಕಾಗುತ್ತದೆ.
ರೈತರು 50 ಸಾವಿರ ರೂಪಾಯಿ ಠೇವಣಿ ಸಂದಾಯ ಮಾಡಿದನಂತರ 30 ದಿನಗಳೊಳಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕೆಂದು ಇಲಾಖೆಯ ಸಂಬಂಧಿಸಿದ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. ಆದಷ್ಟು ಬೇಗ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಗೆ ಇಂಧನ ಇಲಾಖೆ ಸಂಪರ್ಕ ಕಲ್ಪಿಸುತ್ತದೆ.
ಈಗಾಗಲೇ ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸಿದ ರೈತರಿಗೆ ಗಂಗಾ ಕಲ್ಯಾಣ ಯೋಜನೆಯ ಸಂಪರ್ಕ ಹಾಗೂ ವಿದ್ಯುತ್ ಕಲ್ಪಿಸಲು ಇಂಧನ ಇಲಾಖೆ ಮುಂದಾಗಿದೆ. ಅರ್ಹ ಫಲಾನುಭವಿ ಠೇವಣಿ ಹಣ ಜಮೆ ಆದ 30 ದಿನದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕಳೆದ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಅವಧಿಯಲ್ಲಿ ವಿವಿಧ ಅಭಿವೃದ್ಧಿ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ರೈತರೂ ಸಹ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಯೋಜನೆಯಡಿ ಆಯ್ಕೆಯಾದ ರೈತರಿಗೆ ಅತೀ ಶೀಘ್ರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂಜೀವಿನಿ: ಕೆಎಸ್ಆರ್ಎಲ್ಪಿಎಸ್ - ಮೀಶೋ ನಡುವೆ 2500 ಸ್ವಸಹಾಯ ಗುಂಪುಗಳ ಸಬಲೀಕರಣದ ಒಪ್ಪಂದ!