ಬೆಂಗಳೂರು: ಸಮುದಾಯ ಆರೋಗ್ಯ ಅಧಿಕಾರಿಗಳೆಂದು ತಮ್ಮ ಪದನಾಮವನ್ನು ಮುಂದುವರೆಸಲು ಸರ್ಕಾರದ ಮೇಲೆ ಒತ್ತಡ ತರುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.
ಆರೋಗ್ಯ ಸಚಿವರು ಹಾಗೂ ಸಿಎಂ ಜೊತೆ ಈ ಸಂಬಂಧ ಚರ್ಚಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಬಳಿಕ ಈಟಿವಿ ಭಾರತದ ಜೊತೆ ಮಾತನಾಡಿದ ಸಂಘದ ಅಧ್ಯಕ್ಷ ಬೀರೇಂದ್ರ ಕೇಶವ್, ಪ್ರತೀ ಹಳ್ಳಿಯ ಆರೋಗ್ಯ ಕಾಪಾಡುವ ಮಹತ್ವಾಕಾಂಕ್ಷೆಯಿಂದ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಉಪ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಮಾಡಿ ಇಲ್ಲಿ ನಮಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಬಿಎಸ್ಸಿ ನರ್ಸಿಂಗ್, ಎಂಎಸ್ಸಿ ನರ್ಸಿಂಗ್, ಪದವಿ ಮತ್ತು ಸ್ನಾತಕೋತ್ತರ ಪದವೀಧರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಯ್ಕೆಯ ನಂತರ ಸರ್ಕಾರದ ಮೂಲಕ ನಡೆಸುವ ಆರು ತಿಂಗಳ ಬ್ರಿಜ್ ಕೋರ್ಸ್ನಲ್ಲಿ ಸಮುದಾಯ ಆರೋಗ್ಯ ವಿಷಯದಲ್ಲಿ ತಜ್ಞ ವೈದ್ಯರಿಂದ ತರಬೇತಿ ನೀಡಲಾಗಿದೆ ಎಂದು ವಿವರಿಸಿದರು.
ಇದಾದ ಬಳಿಕ ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು ಎಂದು ಆದೇಶ ಹೊರಡಿಸಲಾಗಿದೆ. ಆದರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಸಂಬಂಧ ನಾವು ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೂ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ತರಬೇತಿ ಪಡೆದವರನ್ನು ಸಮುದಾಯ ಆರೋಗ್ಯ ಅಧಿಕಾರಿಗಳು ಎಂದು ಕರೆಯಲಾಗುತ್ತಿದೆ. ಈ ಆಧಾರದ ಮೇಲೆ ನಮ್ಮನ್ನು ಕೂಡ ಅದೇ ರೀತಿ ಪರಿಗಣಿಸುವಂತೆ ಮನವಿ ಮಾಡಿದ್ದೇವೆ. ಇದೀಗ ಸಿದ್ದರಾಮಯ್ಯ ಅವರ ಬಳಿಯೂ ನಮ್ಮ ಕೋರಿಕೆಯನ್ನು ಮುಂದಿಟ್ಟಿದ್ದೇವೆ. ಅವರಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.
ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಮಹೇಶ್ ಮಾತನಾಡಿ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ರೋಗಗಳಿಗೆ ಸ್ಕ್ರೀನಿಂಗ್ ಮಾಡುವುದು ಹಾಗೂ ಸೂಕ್ತವಾದ ಚಿಕಿತ್ಸೆ ನೀಡಲು ಮುಂದಿನ ಶಿಫಾರಸು ನೀಡುವ ಅಧಿಕಾರ ನಮಗಿದೆ. ಈ ಹಿನ್ನೆಲೆ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಉಪ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ 2.5 ವರ್ಷಗಳಿಂದ ನಮಗೆ ಯಾವುದೇ ಪದನಾಮ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.