ಬೆಂಗಳೂರು : ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎ.ಪಿ.ರಂಗನಾಥ್ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅಡ್ವೊಕೇಟ್ಸ್ ಡೈರೆಕ್ಟರಿ-2021 ನೀಡಿದರು.
ನ್ಯಾಯಮೂರ್ತಿಗಳು, ವಕೀಲರ ಸಂಘಗಳ ಮುಖ್ಯಸ್ಥರು ಸೇರಿದಂತೆ ಹಿರಿಯ ವಕೀಲರ ಮಾಹಿತಿ ಒಳಗೊಂಡ ಅಡ್ವೊಕೇಟ್ಸ್ ಡೈರೆಕ್ಟರಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಈ ಡೈರಿಯನ್ನು ಇಂದು ಎಎಬಿ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಸಿಎಂ ಬೊಮ್ಮಾಯಿ ಅವರಿಗೆ ನೀಡಿದರು.
ಇದೇ ವೇಳೆ ಹಿಂದೆ ಸಿಎಂ ನೀಡಿದ್ದ ಆಶ್ವಾಸನೆಯಂತೆ ವಕೀಲರ ಸಂಘದ ಪ್ರಮುಖ ಬೇಡಿಕೆಯಾದ ವಕೀಲರ ರಕ್ಷಣಾ ಕಾಯ್ದೆಯನ್ನು ಹಾಗೂ ವಕೀಲರ ವಿಮಾ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತಂದು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.
ಅಲ್ಲದೇ, ಇದೇ ತಿಂಗಳ 12ರಂದು ನ್ಯಾಯಮೂರ್ತಿ ರವಿ ಮಳಿಮಠ್, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿಗೆ ಸನ್ಮಾನಿಸಲು ವಕೀಲರ ಸಂಘ ಹಮ್ಮಿಕೊಂಡಿರುವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲು ಆಮಂತ್ರಿಸಲಾಯಿತು.
ಇತ್ತೀಚೆಗೆ ಈ ಮೂವರು ನ್ಯಾಯಮೂರ್ತಿಗಳು ವಿವಿಧ ಹೈಕೋರ್ಟ್ಗಳ ಮುಖ್ಯ ನ್ಯಾಯೂರ್ತಿಗಳಾಗಿ ನೇಮಕಗೊಂಡಿದ್ದು, ಎಎಬಿ ಸನ್ಮಾನಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ.