ಬೆಂಗಳೂರು: ಕೊರೊನಾ ಸೋಂಕಿನ ಶೀಘ್ರ ವರದಿಗಾಗಿ ನಾಳೆಯಿಂದ ಆ್ಯಂಟಿಜೆನ್ ಟೆಸ್ಟ್ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ಇದರಿಂದ ಕೆಲವೇ ನಿಮಿಷಗಳಲ್ಲಿ ಕೋವಿಡ್ ಪ್ರಾಥಮಿಕ ತಪಾಸಣೆ ಮಾಡಬಹುದಾಗಿದ್ದು, ಪಾಸಿಟಿವ್ ಕಂಡು ಬಂದವರನ್ನು ಹೆಚ್ಚಿನ ತಪಾಸಣೆಗಾಗಿ ಕಳುಹಿಸಬಹುದಾಗಿದೆ. ಅಲ್ಲದೆ ರೋಗಿಗಳು ಕೋವಿಡ್ ವರದಿ ಬರುವಿಕೆಯನ್ನು ಕಾಯುವುದು ತಪ್ಪಲಿದೆ ಎಂದು ಸಚಿವರು ತಿಳಿಸಿದರು.
ಒಟ್ಟು 3 ಲಕ್ಷ ಆ್ಯಂಟಿಜೆನ್ ಟೆಸ್ಟ್ ಖರೀದಿಸಲು ಚಿಂತಿಸಿದ್ದು, ಈಗಾಗಲೇ ಒಂದು ಲಕ್ಷ ಟೆಸ್ಟ್ ಸಾಧನಗಳು ಬಂದಿವೆ. ನಾಳೆಯಿಂದ 20,000 ಆ್ಯಂಟಿಜೆನ್ ಟೆಸ್ಟ್ ಮಾಡಲಾಗುತ್ತೆ ಎಂದು ಹೇಳಿದರು.
ಇನ್ನೆರಡು ದಿನದಲ್ಲಿ ಕೋವಿಡ್ ಆಸ್ಪತ್ರೆಗಳ ಮಾಹಿತಿ ಸಾರ್ವಜನಿಕರಿಗೆ ಲಭ್ಯ
ಈಗಾಗಲೇ ಖಾಸಗಿ ಆಸ್ಪತ್ರೆಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿದ್ದು, ಒಪ್ಪಂದದಂತೆ ಸರ್ಕಾರಕ್ಕೆ ಹಾಸಿಗೆಗಳನ್ನು ನೀಡುವಂತೆ ತಿಳಿಸಲಾಗಿದೆ. ಇದಕ್ಕಾಗಿ ಇನ್ನೆರಡು ದಿನಗಳಲ್ಲಿ ಆಯಾ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ವಿವರಗಳನ್ನ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಲ್ಲಿ ನೀಡಬೇಕೆಂದು ತಿಳಿಸಲಾಗಿದೆ.
ಈ ಮೂಲಕ ಸಾರ್ವಜನಿಕರಿಗೆ ಕೋವಿಡ್ ಚಿಕಿತ್ಸೆ ಯಾವ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ, ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಉಪಯೋಗಿಸಲಾಗುತ್ತಿದೆ ಎಂಬ ವಿವರ ಸಿಗಲಿದೆ. ಇದರಿಂದ ಸುಲಭವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.