ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಡೆದ ಮಠಾಧೀಶರ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಘೋಷಣೆಗಳು ಮೊಳಗಿ ಹೈಡ್ರಾಮ ನಡೆಯಿತು. ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಣ ಮಾಡಿದ್ದು, ಸ್ವಾಮೀಜಿಗಳೇ ಸ್ಪಷ್ಟೀಕರಣ ನೀಡುವಷ್ಟು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಮಠಾಧೀಶರ ಮಹಾಸಮಾವೇಶದ ವೇದಿಕೆ ಕಾರ್ಯಕ್ರಮ ಮುಕ್ತಾಯಗೊಂಡು ಸ್ವಾಮೀಜಿಗಳು ವೇದಿಕೆ ತೆರವು ಮಾಡುತ್ತಿದ್ದಂತೆ ಭಕ್ತರು ಯಡಿಯೂರಪ್ಪ ಪರ ಘೋಷಣೆ ಕೂಗಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹಾಗು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಧಿಕ್ಕಾರ ಕೂಗಿ ಸ್ಥಳದಲ್ಲಿ ರಾದ್ದಾಂತ ಮಾಡಿದರು. ಬಿ.ಎಸ್ ಯಡಿಯೂರಪ್ಪರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸುವಂತಿಲ್ಲ ಎಂದು ಘೋಷಣೆ ಕೂಗಿದರು.
ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಘೋಷಣೆ ಕೂಗುತ್ತಿದ್ದ ಭಕ್ತರನ್ನು ತೆರವುಗೊಳಿಸಿದರು. ಭಕ್ತರ ಘೋಷಣೆಯಿಂದ ಪೇಚಿಗೆ ಸಿಲುಕಿದ ಸ್ವಾಮೀಜಿಗಳು ಸ್ಪಷ್ಟೀಕರಣ ನೀಡಬೇಕಾಯಿತು. ಆಯೋಜಕರ ಪರವಾಗಿ ಷಡಕ್ಷರಿ ಮಠದ ರುದ್ರಮುನಿ ಶ್ರೀಗಳು ಮಾತನಾಡಿ, ಭಕ್ತರ ಘೋಷಣೆಗೂ ನಮ್ಮ ಸಮಾವೇಶಕ್ಕೂ ಯಾವುದೇ ಸಂಬಂಧ ಇಲ್ಲ, ಸಣ್ಣಪುಟ್ಟ ತಪ್ಪು ಮಾಡಿದ್ದರೆ ಅನ್ಯತಾ ಭಾವಿಸಬಾರದು ಎಂದು ಸ್ಪಷ್ಟೀಕರಣ ನೀಡಿದರು.