ಬೆಂಗಳೂರು : ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆಯ ಜೊತೆ ಶೇ.6% ಗ್ರಂಥಾಲಯ ಸೆಸ್‌ಗಳನ್ನು ಸಂಗ್ರಹಿಸುತ್ತಿದ್ದು, ಈ ಹಣವನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ.
ಸೆಸ್ ಮೂಲಕ ಸಂಗ್ರಹವಾಗುವ ಸುಮಾರು 500 ಕೋಟಿ ರೂ.ಗಳನ್ನು ಕನ್ನಡ ಪುಸ್ತಕ ಅಭಿವೃದ್ಧಿಗೆ ಬಳಸಿದ್ರೆ ಅದರಿಂದ ಕನ್ನಡ ಪುಸ್ತಕ ಲೋಕದ ಚಿತ್ರವೇ ಬದಲಾಗುತ್ತದೆ. ಪುಸ್ತಕೋದ್ಯಮವನ್ನು ಗುಣಾತ್ಮಕವಾಗಿ ಬೆಳೆಸಲು ಸರ್ಕಾರ ಹೊಸ ಯೋಜನೆಗಳನ್ನು ಘೋಷಿಸುವುದು ಅಗತ್ಯವಿದೆ ಎಂದರು.
ಪ್ರಶಸ್ತಿ ಪುರಸ್ಕೃತರ ಪರಿಚಯವುಳ್ಳ ‘ದರ್ಪಣ’ ಕೈಪಿಡಿ ಬಿಡುಗಡೆ ಮಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ ಎನ್ ನಂದೀಶ್ ಹಂಚೆ ಮಾತನಾಡಿ, ಕನ್ನಡ ಪುಸ್ತಕ ಪ್ರಾಧಿಕಾರವು ಮುಂಬರುವ ದಿನಗಳಲ್ಲಿ ಆಧುನಿಕ ಸಮೂಹ ಮಾಧ್ಯಮಗಳನ್ನು ಬಳಸಿಕೊಂಡು ಪುಸ್ತಕೋದ್ಯಮಕ್ಕೆ ಪೂರಕ ಯೋಜನೆಗಳನ್ನು ರೂಪಿಸುತ್ತದೆ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತರ ಪರ ಮಾತನಾಡಿದ ಬಸವರಾಜ ಕಲ್ಗುಡಿ, ಎಂ ಎಂ ಕಲಬುರ್ಗಿ ಅವರನ್ನು ನೆನೆದು ಭಾವುಕರಾದರು. ವಿಚಾರವಂತರ ಹತ್ಯೆ ಮತ್ತು ವಿಚಾರಗಳ ದಮನ ಮಾಡುವುದು ಮಾನವೀಯತೆ ಇಲ್ಲದವರ ಕೆಲಸ. ಇದು ಕನ್ನಡ ಸಾಂಸ್ಕೃತಿಕ ಲೋಕದ ಘನತೆ ಹಾಳು ಮಾಡುತ್ತದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಮಾತನಾಡಿ, ಪುಸ್ತಕ ಜ್ಞಾನಾರ್ಜನೆ ಜೊತೆಗೆ ಜೀವನದ ದಿಕ್ಕನ್ನು ಬದಲಿಸುತ್ತದೆ. ಹಳ್ಳಿಗೊಂದು ಗ್ರಂಥಾಲಯವಿದ್ದರೆ ಆ ಹಳ್ಳಿಯ ಯುವಜನತೆಗೆ ಓದುವ ಗೀಳು ಹತ್ತುತ್ತದೆ.
ಓದಿನ ಗೀಳು ಅವರ ಬದುಕಿನ ದೃಷ್ಟಿಕೋನವನ್ನು ಉನ್ನತೀಕರಿಸಿ ಅವರು ಜೀವನದಲ್ಲಿ ಮೇಲೆ ಬರಲು ನೆರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಡಾ. ಎಂ ಎನ್ ನಂದೀಶ್ ಹಂಚೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ ಬಿ ಕಿರಣ್ ಸಿಂಗ್ ಮತ್ತು ಸಹಾಯಕ ನಿರ್ದೇಶಕಿ ಸೌಭಾಗ್ಯ ಭಾಗವಹಿಸಿದ್ದರು.