ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ಗೆ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿನ ಹಗ್ಗಾ ಜಗ್ಗಾಟಕ್ಕೆ ಇಂದು ತೆರೆಬಿದ್ದಿದೆ. ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಮಂಗಳವಾರ ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಿದ್ದು, ಎಲ್ಲಾ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಹಿಂದ ವರ್ಗದವರನ್ನು ಸೆಳೆಯುವ ದೃಷ್ಟಿಯಲ್ಲಿಟ್ಟುಕೊಂಡು ಮೂರು ಪಕ್ಷಗಳು ಜಾತಿ ಸಮೀಕರಣ ಮಾಡಿ ದಲಿತ, ಹಿಂದುಳಿದ ಮತ್ತು ಅಲ್ಪಸಮುದಾಯದ ವರ್ಗಗಳಿಗೆ ಮಣೆ ಹಾಕಿವೆ. ಏಳು ಸ್ಥಾನಗಳ ಪೈಕಿ ಆರು ಸ್ಥಾನಗಳು ಅಹಿಂದ ವರ್ಗದವರಿಗೆ ಆದ್ಯತೆ ನೀಡಲಾಗಿದೆ. ಒಂದು ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ನೀಡಲಾಗಿದೆ.
17 ನಾಮಪತ್ರಗಳು ಸಲ್ಲಿಕೆ: ಚುನಾವಣೆ ನಡೆಯುವ ಏಳು ಸ್ಥಾನಗಳಲ್ಲಿ ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಆಡಳಿತರೂಢ ಬಿಜೆಪಿಗೆ ನಾಲ್ಕು, ಪ್ರತಿಪಕ್ಷ ಕಾಂಗ್ರೆಸ್‌ಗೆ ಎರಡು ಮತ್ತು ಜೆಡಿಎಸ್‌ಗೆ ಒಂದು ಸ್ಥಾನ ಲಭಿಸಿದೆ. ಅದರಂತೆ ಏಳು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಸುಲಭವಾಗಿ ಗೆಲುವು ಸಾಧಿಸಬಹುದಾಗಿದೆ. ಪ್ರತಿ ಅಭ್ಯರ್ಥಿಯು 2-3 ಪ್ರತಿ ನಾಮಪತ್ರ ಸಲ್ಲಿಕೆ ಮಾಡಿರುವುದರಿಂದ ಏಳು ಅಭ್ಯರ್ಥಿಗಳಿಂದ 17 ನಾಮಪತ್ರಗಳು ಸಲ್ಲಿಕೆಯಾಗಿವೆ. ಚುನಾವಣಾಧಿಕಾರಿ ಹಾಗೂ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ಇಂದು ನಾಮಪತ್ರ ಸಲ್ಲಿಸಲಾಯಿತು.
ಆಡಳಿತರೂಢ ಬಿಜೆಪಿ ಅಭ್ಯರ್ಥಿಗಳಾಗಿ ಹಾಲಿ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಎಸ್‌ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಎಸ್.ಕೇಶವಪ್ರಸಾದ್ ಮತ್ತು ಹೇಮಲತಾ ನಾಯಕ್ ಅವರು ನಾಮಪತ್ರ ಸಲ್ಲಿಸಿದರು. ಪ್ರತಿಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಪಕ್ಷದ ವಕ್ತಾರ ಎಂ. ನಾಗರಾಜ್ ಯಾದವ್ ಮತ್ತು ಮೇಲ್ಮನೆ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.
ಅವಿರೋಧ ಆಯ್ಕೆ ನಿಶ್ಚಿತ: ಪ್ರತಿ ಅಭ್ಯರ್ಥಿಗೂ ಆಯಾ ಪಕ್ಷದ ತಲಾ 10 ಶಾಸಕರು ಸೂಚಕರಾಗಿ ಸಹಿ ಮಾಡಿದ್ದಾರೆ. ಜೂನ್ 14 ರಂದು ಖಾಲಿಯಾಗುವ ಏಳು ಸ್ಥಾನಕ್ಕೆ ಜೂನ್ 3 ರಂದು ಚುನಾವಣೆ ನಡೆಯುತ್ತಿದೆ. ಹೆಚ್ಚುವರಿ ನಾಮಪತ್ರಗಳು ಸಲ್ಲಿಕೆಯಾಗದೆ, ಏಳು ಸ್ಥಾನಕ್ಕೆ ಏಳು ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಹೆಚ್ಚುವರಿ ಉಮೇದುವಾರಿಕೆ ಸಲ್ಲಿಕೆಯಾಗದಿರುವ ಹಿನ್ನೆಲೆಯಲ್ಲಿ ಏಳು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಶುಕ್ರವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಚುನಾವಣೆ ನಡೆಯದಿದ್ದರೆ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರು ಅಭ್ಯರ್ಥಿಗಳ ಆಯ್ಕೆ ಕುರಿತು ಅಂತಿಮ ಘೋಷಣೆ ಮಾಡಲಿದ್ದಾರೆ.
ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆ: ಕ್ಷೇತ್ರ ವಿಂಗಡಣೆ-ಮೀಸಲಾತಿ ನಿಗದಿಗೆ ಗಡುವು ವಿಧಿಸಿದ ಹೈಕೋರ್ಟ್