ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ತನ್ನ ಕಬಂಧಬಾಹುಗಳನ್ನು ಚಾಚುತ್ತಲೇ ಇರುವ ಹಿನ್ನೆಲೆ ಮಹಾಮಾರಿ ತಡೆಗೆ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರು ಸಚಿವರು, ಶಾಸಕರು ಹಾಗೂ ಸಂಸದರೊಂದಿಗಿನ ಸಭೆ ನಡೆಸುತ್ತಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷ ಮುಖಂಡರೊಂದಿಗೆ ಸಿಎಂ ಬಿಎಸ್ವೈ ಸಭೆ ಆರಂಭಿಸಿದ್ದು, ಕೋವಿಡ್-19 ನಿಯಂತ್ರಣದ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳಿಂದ ಸಲಹೆ ಪಡೆಯುತ್ತಿದ್ದು, ನಗರದ 28 ವಿಧಾನಸಭಾ ಕ್ಷೇತ್ರವಾರು ಮಾಹಿತಿ ಪಡೆಯಲಿದ್ದಾರೆ. ಯಾವ್ಯಾವ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ ಅನ್ನೋ ಬಗ್ಗೆ ಮಾಹಿತಿ ಪಡೆದು ಮುಂದೇನು ಮಾಡಬೇಕು ಎನ್ನುವ ಕುರಿತು ಸಮಾಲೋಚನೆ ನಡೆಸುತ್ತಿದ್ದಾರೆ.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ, ಸಚಿವರಾದ ಶ್ರೀರಾಮುಲು, ಆರ್ ಅಶೋಕ್, ಬೈರತಿ ಬಸವರಾಜ್, ಬಸವರಾಜ್ ಬೊಮ್ಮಾಯಿ, ಸುರೇಶ್ ಕುಮಾರ್, ಸಂಸದರಾದ ತೇಜಸ್ವಿ ಸೂರ್ಯ, ಡಿ ಕೆ ಸುರೇಶ್, ಕೆ ಜೆ ಜಾರ್ಜ್ ಶಾಸಕರಾದ ಜಮೀರ್ ಅಹ್ಮದ್, ಎಂ ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಹ್ಯಾರಿಸ್, ಉದಯ್ ಗರುಡಾಚಾರ್, ರಘು, ವಿಶ್ವನಾಥ್, ಜೆಡಿಎಸ್ ಎಂಎಲ್ಸಿ ಶರವಣ, ರಮೇಶ್ ಗೌಡ ಸೇರಿ ಹಲವು ಮುಖಂಡರು ಭಾಗಿಯಾಗಿದ್ದಾರೆ.
ಗೈರು...
ಸಭೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತಿತರ ನಾಯಕರು ಗೈರಾಗಿದ್ದಾರೆ.