ಬೆಂಗಳೂರು: ಫೆಬ್ರವರಿ 26 ರಿಂದ 28ರವರೆಗೆ ಹಾವೇರಿಯಲ್ಲಿ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಈ ಸಂಬಂಧ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯ ನಂತರ ಈ ವಿಚಾರ ಪ್ರಕಟಿಸಿದ್ದಾರೆ. ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ನಡೆಯುತ್ತಿರುವ ಸಿದ್ಧತೆಗಳು ಅಪೂರ್ಣವಾಗಿವೆ. ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದರಿಂದ ಕೋವಿಡ್ ನಿಯಮಗಳ ಪಾಲನೆಯು ಕಷ್ಟಕರವಾಗುತ್ತದೆ. ಫೆಬ್ರವರಿ ಅಂತ್ಯಕ್ಕೆ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆಯಿರುವುದರಿಂದ ಮಾರ್ಚ್ 9ಕ್ಕೆ ಮತ್ತೊಂದು ಸಭೆ ನಡೆಸಿ, ಸಮ್ಮೇಳನ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಓಧಿ: ಬಾಡಿಗೆ ಕೇಳಿದ್ದಕ್ಕೆ ಮಾಲೀಕರ ಕತ್ತು ಕೊಯ್ದ.. ವಿಚಾರಣೆ ವೇಳೆ ಹೊರಬಂತು ನಿಗೂಢ ರಹಸ್ಯ
ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ತೋಟಗಾರಿಕಾ ಸಚಿವ ಆರ್.ಶಂಕರ್, ಶಾಸಕ ನೆಹರು ಓಲೇಕಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಹಾಗೂ ಹಾವೇರಿ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.