ಬೆಂಗಳೂರು: ಕಳೆದ ತಿಂಗಳು ನಟ ಸಂಚಾರಿ ವಿಜಯ್ರನ್ನು ಬಲಿ ತೆಗೆದುಕೊಂಡ ಅಪಘಾತದ ಬಗ್ಗೆ ಅಂದು ಬೈಕ್ ಓಡಿಸುತ್ತಿದ್ದ ವಿಜಯ್ ಸ್ನೇಹಿತ ನವೀನ್ ಇಂದು ಪೊಲೀಸರೆದುರು ಹಾಜರಾಗಿ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಜಯನಗರ ಪೊಲೀಸ್ ಠಾಣೆಗೆ ಆಗಮಿಸಿ ಹೇಳಿಕೆ ನೀಡಿರುವ ನವೀನ್, ಅಪಘಾತದ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ. ಜಯನಗರ ಟ್ರಾಫಿಕ್ ಪೊಲೀಸರು ಹೇಳಿಕೆ ದಾಖಲಿಸಿಕೊಂಡು, ಠಾಣಾ ಜಾಮೀನಿನ ಮೇಲೆ ನವೀನ್ ಅವರನ್ನು ಬಿಡುಗಡೆ ಮಾಡಿ, ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ (ಅಮೆರಿಕದ ಪ್ರತಿಷ್ಠಿತ ಫ್ರಾಂಕ್ಲಿನ್ ಥಿಯೇಟರ್‌ನಲ್ಲಿ ಸಂಚಾರಿ ವಿಜಯ್ಗೆ ಗೌರವ)
ವಿಜಯ್ ಸ್ನೇಹಿತ ಹೇಳಿದ್ದೇನು?
ಅಪಘಾತ ನಡೆದ ಜೂನ್ 12 ರ ರಾತ್ರಿ ಸಂಚಾರಿ ವಿಜಯ್ ಮತ್ತು ತಂಡ ಸ್ನೇಹಿತರ ಮನೆಯಲ್ಲಿ ಸೇರಿದ್ರಂತೆ. ಕೋವಿಡ್ ಕಿಟ್ ಮತ್ತು ಇತರೆ ಆಹಾರ ಸಾಮಗ್ರಿಗಳ ಸಹಾಯದ ಬಗ್ಗೆ ವಿಜಯ್ ಮತ್ತು ಸ್ನೇಹಿತರಿಂದ ಅಂದು ಚರ್ಚೆ ನಡೆಸಿದ್ದರು. ಫುಡ್ ಕಿಟ್, ಔಷಧಿ ಸೇರಿದಂತೆ ಇತರೆ ಸಹಾಯ ಮಾಡಲು ನಿರ್ಧಾರ ಮಾಡಿದ್ದೆವು ಎಂದು ಪೊಲೀಸರಿಗೆ ನವೀನ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ (ಮಹಿಳೆಗೆ ಕಿಡ್ನಿ, ಇಬ್ಬರು ಅಂಧರಿಗೆ ಕಣ್ಣು ಕೊಟ್ಟು ಜಗತ್ತು ತೋರಿಸಿದ ಸಂಚಾರಿ ವಿಜಯ್)
ನಾವು ಚರ್ಚೆ ಮಾಡುತ್ತಿದ್ದಾಗ ಮನೆಯಿಂದ ನನ್ನ ಪತ್ನಿಯ ಫೋನ್ ಬಂತು. ಪತ್ನಿಗೆ ಮಾತ್ರೆ ತರಲು ದ್ವಿಚಕ್ರ ವಾಹನದಲ್ಲಿ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೊರಟೆ. ಈ ವೇಳೆ ತಾನೂ ಬರುವುದಾಗಿ ವಿಜಯ್ ಹೇಳಿದ, ಮಾತ್ರೆಗಳನ್ನು ತೆಗೆದುಕೊಂಡು ವಾಪಸ್ ಬರಬೇಕಾದರೆ ಬೈಕ್ ಅಪಘಾತ ಸಂಭವಿಸಿತು. ಸ್ಕಿಡ್ ಆದ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು ಎಂದು ಹೇಳಿಕೆ ನೀಡಿದ್ದಾರೆ.