ಬೆಂಗಳೂರು : ಅಕಾಡೆಮಿಕ್ ಆಗಿ ಹೆ್ಚ್ಚು ಓದಿರದಿದ್ದರೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಬೇಕೆಂಬ ಹಂಬಲ ಹಾಗೂ ಸ್ವಂತ ಬ್ಯಾನರ್ ಅಡಿಯಲ್ಲಿ ತಮ್ಮ ತಂದೆ ವರನಟ ಡಾ. ರಾಜ್ ಕುಮಾರ್ ಅವರ ಬಯೋಪಿಕ್ ನಿರ್ಮಿಸಬೇಕು ಎಂಬ ಪುನೀತ್ ರಾಜ್‌ಕುಮಾರ್ ಕನಸು ಕನಸಾಗಿಯೇ ಉಳಿಯಿತು.
ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಕಳೆದ ಆಗಸ್ಟ್ನಲ್ಲಿ ಡಾ.ರಾಜ್ ಕುಮಾರ್ ಅವರ ಹೆಸರಿನಲ್ಲಿ ಕಲಿಕಾ ಅವಕಾಶಗಳನ್ನು ಒಳಗೊಂಡಿರುವ ಅಪ್ಲಿಕೇಷನ್ ಬಿಡುಗಡೆಯಾಗಿತ್ತು. ಈ ಆ್ಯಪ್ ಅನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದರು.
'ಗುಣಮಟ್ಟದ ಶಿಕ್ಷಣ ಎಲ್ಲರಿಗಾಗಿ.. ಬನ್ನಿ ಮುಂದೆ ಸಾಗೋಣ' ಎಂಬ ಸಾಲಿನ ಜೊತೆಗೆ "ಬಡತನ ಓದಿಸೋರಿಗೆ ಇರುತ್ತೆ, ಓದುವವರಿಗೆ ಅಲ್ಲ, 'ನಿಮ್ಮ ಕನಸಿನ ಜೊತೆಗೆ ನಿಮ್ಮ ಅಪ್ಪ–ಅಮ್ಮನ ಕನಸೂ ಈಡೇರಿಸಬಹುದು', 'ಓದಿದ ಮೇಲೆ ಕೆಲಸ ಮಾಡ್ತಾರೆ.
ಕೆಲವರು ಕೆಲಸ ಮಾಡಿಕೊಂಡೂ ಓದುತ್ತಾರೆ.' ಇರುವ ಜಾಗದಲ್ಲೇ, ನಿಮ್ಮ ದುಡಿಮೆಯಲ್ಲೇ ಕನಸನ್ನು ಸಾಕಾರಗೊಳಿಸಬಹುದು'' ಎಂಬುದರ ಬಗ್ಗೆ ಹೇಳಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಪುನೀತ್ ರಾಜ್ ಕುಮಾರ್, ಹಲವು ಸನ್ನಿವೇಶನಗಳ ಜೊತೆಗೆ ಆ್ಯಪ್ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದರು.
![actor puneeth rajkumar dream to create biopic of his father](https://etvbharatimages.akamaized.net/etvbharat/prod-images/kn-bng-04-puneet-rajkumar-story-script-7208083_29102021182131_2910f_1635511891_855.jpg)
ತಂದೆಯ ಬಯೋಪಿಕ್ ಮಾಡುವ ಆಸೆಗೆ ತಣ್ಣೀರು : ಕನ್ನಡ ಚಿತ್ರರಂಗ ಅಭಿವೃದ್ಧಿ ಆಗಬೇಕೆಂಬ ಕನಸು ಹೊತ್ತಿದ್ದ ಪುನೀತ್ ರಾಜಕುಮಾರ್, ಹೊಸಬರು ಚಿತ್ರರಂಗಕ್ಕೆ ಬರಬೇಕು. ಉತ್ತಮ ಸ್ಕ್ರಿಪ್ಟ್‌ಗಳಿದ್ದರೆ ಸಿನಿಮಾ ಗೆಲುವು ನಿಶ್ಚಿತ ಎಂಬ ಬಲವಾದ ನಂಬಿಕೆ ಅವರದಾಗಿತ್ತು.
ಹೊಸಬರಿಗೆ ಅವಕಾಶ ನೀಡುತ್ತಿದ್ದ ಪುನೀತ್, ಪಿಆರ್‌ಕೆ ಪ್ರೊಡಕ್ಷನ್ (ಪಾರ್ವತಮ್ಮ ರಾಜ್‌ಕುಮಾರ್ ಪ್ರೊಡಕ್ಷನ್) ಸ್ಥಾಪಿಸಿದ್ದರು. ಅದನ್ನು ಅವರ ಪತ್ನಿ ಅಶ್ವಿನಿ ಅವರು ನೋಡಿಕೊಳ್ಳುತ್ತಿದ್ದರು.
2019ರಲ್ಲಿ ಮೊದಲ ಬಾರಿಗೆ ಪಿಆರ್‌ಕೆ ಪ್ರೊಡಕ್ಷನ್‌ನಡಿ 'ಕವಲುದಾರಿ' ಚಿತ್ರವನ್ನು ನಿರ್ಮಿಸಿದ್ದರು. ಆ ನಂತರ ಮಾಯಾಬಜಾರ್ 2016, ಲಾ, ಫ್ರೆಂಚ್ ಬಿರಿಯಾನಿ ಸಿನಿಮಾಗಳನ್ನು ಪುನೀತ್ ನಿರ್ಮಿಸಿದ್ದರು. ಬೆಳ್ಳಿ ಪರದೆಯಲ್ಲಿ ಮಿಂಚಿದ ಸಿನಿಮಾ ನಟ, ನಟಿಯರ ಜೀವನಗಾಥೆ ತೆರೆಯ ಮೇಲೆ ಬರುತ್ತಿದೆ.
ತೆಲುಗಿನ ಖ್ಯಾತ ನಟ ಎನ್.ಟಿ.ರಾಮರಾವ್ ಅವರ ಜೀವನ ಸಿನಿಮಾ ರೂಪದಲ್ಲಿ ಬಂದಿತ್ತು. ಅದರಂತೆ ತನ್ನ ತಂದೆ ರಾಜ್‌ಕುಮಾರ್ ಅವರ ಬಯೋಪಿಕ್ ನಿರ್ಮಿಸುವ ಆಸೆ ಪುನೀತ್ ಅವರಲ್ಲಿತ್ತು. ಪಿಆರ್‌ಕೆ ಪ್ರೊಡಕ್ಷನ್‌ನಡಿಯೇ ನಿರ್ಮಿಸಿವ ಅಭಿಲಾಷೆ ಹೊಂದಿದ್ದರು. ಆದ್ರೆ, ಅದು ಸಾಕಾರಗೊಳ್ಳುವ ಮುನ್ನ ಪುನೀತ್ ಇಹಲೋಕ ತ್ಯಜಿಸಿದ್ದಾರೆ.