ಬೆಂಗಳೂರು: ಹೊಸದಾಗಿ ಮೇಕೆದಾಟು ಅಣೆಕಟ್ಟು ಕಟ್ಟುವುದರ ಬಗ್ಗೆ ನಮ್ಮ ವಿರೋಧವಿದೆ. ಅಣೆಕಟ್ಟು ಕಟ್ಟಿದರೆ ಅಲ್ಲಿನ ಅರಣ್ಯ ಪ್ರದೇಶ ನಾಶವಾಗಿ ಜೀವಸಂಕುಲಕ್ಕೆ ಹೊಡೆತ ಬೀಳಲಿದೆ ಹಾಗೂ ಅಲ್ಲಿ ವಾಸಿಸುತ್ತಿರುವ ಅನೇಕ ಹಳ್ಳಿಗಳ ಜನರ ಜೀವನ ಬೀದಿಪಾಲಾಗಲಿದೆ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಹೇಳಿದರು.
ಮೇಕೆದಾಟು ಯೋಜನೆ ಕುರಿತಂತೆ ಬುಧವಾರ ಪ್ರೆಸ್ ಕ್ಲಬ್ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿ, ನಾನು ಮೊದಲಿನಿಂದಲೂ ಮೇಕೆದಾಟು ಪರವಾಗಿದ್ದೇನೆ. ಆದರೆ, ಅಣೆಕಟ್ಟು ಕಟ್ಟುವುದಕ್ಕೆ ವಿರೋಧವಿದೆ. ಕೃಷಿಗೆ ಮತ್ತು ಕುಡಿಯುವ ನೀರಿಗೆ ಸರ್ಕಾರಗಳು ಮಳೆಯ ನೀರಿಗೆ ವ್ಯವಸ್ಥಿತವಾಗಿ ಯೋಜನೆಗಳನ್ನು ರೂಪಿಸಬೇಕು. ಇರುವ ಜಲಸಂಪನ್ಮೂಲವನ್ನು ವೈಜ್ಞಾನಿಕವಾಗಿ ಪೋಲಾಗದಂತೆ ತಡೆದು ಅವುಗಳಿಗೆ ಸರಿಯಾದ ರೂಪ ಕೊಟ್ಟರೆ ಯಾವ ಡ್ಯಾಂಗಳು ಅವಶ್ಯಕತೆ ಇಲ್ಲ ಎಂದರು.
ಬೆಂಗಳೂರಿನಲ್ಲಿ ಇರುವ ಕಾವೇರಿ ನೀರನ್ನು ನಾವು ಸರಿಯಾಗಿ ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ಪೋಲಾಗುವ ನೀರನ್ನು ತಡೆದರೆ ನಗರಕ್ಕೆ ನೀರಿನ ಅಭಾವ ಎಂದು ಕಾಡುವುದಿಲ್ಲ. ಚಿಕ್ಕ-ಚಿಕ್ಕ ಕೆರೆಗಳಲ್ಲಿ ನೀರನ್ನು ಶೇಖರಿಸಿ, ಮಳೆ ನೀರನ್ನು ಅಲ್ಲೇ ಇಂಗುವಂತೆ ಮಾಡಿದರೆ ಅಂತರ್ಜಲ ವೃದ್ಧಿಯಾಗಿ ಜಲ ಅಭಾವ ದೂರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಲ ಅಭಾವ ದೂರ ಮಾಡುವ ಬಗ್ಗೆ ಗೊತ್ತಿದ್ದರೂ ರಾಜ್ಯ ಸರ್ಕಾರ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತರಲೇಬೇಕೆಂದು ಬಜೆಟ್ನಲ್ಲಿ ಘೋಷಿಸಿದೆ. ಎಂದಿಗೂ ಇದು ಕಾರ್ಯಗತವಾಗಲು ನಾವು ಬಿಡುವುದಿಲ್ಲ. ರಾಜಕೀಯಕ್ಕಾಗಿ ಬೇಳೆ ಬೇಯಿಸಿಕೊಳ್ಳಲು ಹೊರಟವರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಚೇತನ್ ಎಚ್ಚರಿಕೆ ರವಾನಿಸಿದರು.
ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಜಲತಜ್ಞ ರಾಜೇಂದ್ರ ಸಿಂಗ್, ಹೊಸ ಮೇಕೆದಾಟು ಅಣೆಕಟ್ಟು ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲ. ಇಂದಿನ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಜನಸಾಮಾನ್ಯರ ಪರವಾಗಿ ಯೋಚನೆ ಮಾಡುತ್ತಿಲ್ಲ. ಬದಲಾಗಿ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ನಿಂತಿವೆ ಎಂದು ದೂರಿದರು.
ಡ್ಯಾಂ ಕಟ್ಟುವುದರಿಂದ ರಾಜಕೀಯ ವ್ಯಕ್ತಿಗಳ ಜೇಬುಗಳು ತುಂಬುತ್ತವೆ. ಶ್ರೀಮಂತರಿಗೆ ಅನುಕೂಲವಾಗುತ್ತದೆ. ಇದಕ್ಕಾಗಿ ಡ್ಯಾಂ ಸಂಸ್ಕೃತಿಯನ್ನು ಮುಂದುವರಿಸಿದ್ದಾರೆ. ಇರುವ ನೀರಿನ ಮೂಲಗಳನ್ನು ವಿಕೇಂದ್ರೀಕರಿಸಿ ಉತ್ತಮವಾಗಿ ನಿರ್ವಹಣೆ ಮಾಡಿದಾಗ ನೀರಿನ ಅಭಾವ ತಗ್ಗುತ್ತದೆ. ನದಿಗಳ ಅಕ್ಕ-ಪಕ್ಕ ಇರುವ ಜಾಗವನ್ನು ರಿಯಲ್ ಎಸ್ಟೇಟ್ ಮಾಫಿಯಾಗೆ ಬಳಕೆ ಮಾಡುವುದರಿಂದ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಹಾಳಾಗಿದೆ. ಇದಕ್ಕೆ ಈಗಿನ ವ್ಯವಸ್ಥೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ: ತಮಿಳುನಾಡು ಜಲಸಂಪನ್ಮೂಲ ಸಚಿವ