ಬೆಂಗಳೂರು: ಈ ವರ್ಷವೂ ಹೊಸ ವರ್ಷದ ಸಂಭ್ರಮಕ್ಕೆ ಕೊರೊನಾ ಸೋಂಕು ಅಡ್ಡಿಯಾಗಿದೆ. ರೂಪಾಂತರಿ ಒಮಿಕ್ರಾನ್ ಮಾತ್ರವಲ್ಲದೇ, ಕೊರೊನಾ ಸೋಂಕಿನ ಹರಡುವಿಕೆಯೂ ಹೆಚ್ಚಾಗಿದೆ. ನಿನ್ನೆ ಒಂದೇ ದಿನ 707 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಮೂರನೇ ಅಲೆ ಆತಂಕ ಜೋರಾಗಿದೆ.
ಕೋವಿಡ್ ಚಿಕಿತ್ಸಾ ಕೇಂದ್ರ:
200-300ರ ಆಸುಪಾಸಿನಲ್ಲಿ ಪತ್ತೆಯಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಕಳೆದೆರಡು ದಿನಗಳಿಂದ ಏರಿಕೆ ಆಗುತ್ತಿದೆ. ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾದ ಕಾರಣ ಆರೋಗ್ಯ ಇಲಾಖೆಯು ಹೆಚ್ಚು ಆ್ಯಕ್ಟಿವ್ ಆಗಿದ್ದು ನಾನ್ ಕೋವಿಡ್ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಬದಲಾಯಿಸಲು ಮುಂದಾಗುತ್ತಿದೆ.
ರಾಜ್ಯದಲ್ಲಿ ಮೂರನೇ ಅಲೆ ಅಪ್ಪಳಿಸಿದೆಯಾ, ಇಲ್ಲವಾ ಎಂಬುದನ್ನು ಒಂದು ವಾರದ ಒಟ್ಟು ಕೊರೊನಾ ಪ್ರಕರಣಗಳ ಮೇಲೆ ನಿರ್ಧಾರ ಮಾಡಲಾಗುತ್ತದೆ. ಒಂದು ವಾರದಲ್ಲಿ ಕೇಸ್ಗಳು ಏರಿಕೆ ಆಗುತ್ತಲೇ ಹೋದರೆ ಅದನ್ನೂ ಮೂರನೇ ಅಲೆಯ ಮುನ್ಸೂಚನೆ ಎಂದು ಪರಿಗಣಿಸಲಾಗುತ್ತದೆ. ಸದ್ಯ ಮೂರು ದಿನಗಳಿಂದ ಕೋವಿಡ್ ಕೇಸ್ಗಳು ಏರಿಕೆ ಆಗುತ್ತಿದೆ.
ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡಾದ ಸಿವಿ ರಾಮನ್ ಹಾಸ್ಪಿಟಲ್:
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆಯು ಸಿವಿ ರಾಮನ್ ನಗರ ಜನರಲ್ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟು ಇಂದು ಆದೇಶ ಹೊರಡಿಸಿದೆ. ಈ ಹಿಂದೆ ಕೋವಿಡ್ ತೀವ್ರತೆ ಕಡಿಮೆಯಾದ ಬೆನ್ನಲ್ಲೇ ನಾನ್ ಕೋವಿಡ್ ಆಸ್ಪತ್ರೆಯಾಗಿತ್ತು. ಇದೀಗ ದಿಢೀರ್ ಪ್ರಕರಣಗಳು ಹೆಚ್ಚಳವಾದ ಕಾರಣಕ್ಕೆ ಸಿವಿ ರಾಮನ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲಾಗಿದೆ. ಇನ್ನು ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಒಟ್ಟು 166 ಬೆಡ್ಗಳಿವೆ.
ಇದರಲ್ಲಿ ಐಸಿಯು ವಿತ್ ವೆಂಟಿಲೇಟರ್ ವ್ಯವಸ್ಥೆಯ 16 ಬೆಡ್ಗಳಿದ್ದು, 30 ಹೆಚ್ಡಿಯು ಬೆಡ್ಗಳಿವೆ (high dependency unit). 75 ಬೆಡ್ಗಳು ಆಕ್ಸಿಜನ್ ವ್ಯವಸ್ಥೆ ಹೊಂದಿವೆ. 45 ಜನರಲ್ ಬೆಡ್ ಗಳು ಇವೆ.
ಕೊರೊನಾ ವಿವರ:
ದಿನಾಂಕ | ಬೆಂಗಳೂರು | ರಾಜ್ಯ | ಟೆಸ್ಟಿಂಗ್ ಸಂಖ್ಯೆ |
26-12-2021 | 248 | 348 | 73,894 |
27-12-2021 | 172 | 289 | 58,495 |
28-12-2021 | 269 | 356 | 69,993 |
29-12-2021 | 400 | 566 | 1,08,726 |
30-12-2021 | 565 | 707 | 1,14,686 |
ಕೋವಿಡ್ ನಿರ್ವಹಣೆಗೆ ಹಣಕಾಸು ನೆರವು:
ರಾಜ್ಯದಲ್ಲಿ ಒಮಿಕ್ರಾನ್ ಹಾಗೂ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಬಿಗಿ ಕ್ರಮಗಳ ಪಾಲನೆಗೆ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಮೂರನೇ ಅಲೆಗೆ ಅಗತ್ಯ ಮುಂಜಾಗೃತೆ ಕ್ರಮಕ್ಕೂ ಆದೇಶಿಸಿದ್ದು, ಜಿಲ್ಲಾ ಹಾಗೂ ತಾಲಕು ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ. ವಿಶೇಷವಾಗಿ ಮಕ್ಕಳಿಗಾಗಿ ವಿಶೇಷ ವಾರ್ಡ್ ವ್ಯವಸ್ಥೆ ಮಾಡಬೇಕು. ಜನವರಿ 14ರೊಳಗೆ ಮೊದಲ ಡೋಸ್ ಮುಗಿಸಲು ಗಡುವು ನೀಡಲಾಗಿದೆ. ಜನವರಿ 3 ರಿಂದ ಶುರುವಾಗುವ 15 ರಿಂದ 18 ವರ್ಷದ ಮಕ್ಕಳ ಲಸಿಕಾಕರಣ ಯಶಸ್ವಿಯಾಗಿ ನಡೆಸಲು ತಿಳಿಸಲಾಗಿದೆ. ಕೋವಿಡ್ ನಿರ್ವಹಣೆಗೆ ಅಗತ್ಯ ಹಣಕಾಸು ನೆರವು ನೀಡುವ ಭರವಸೆ ನೀಡಿದ್ದು, ಹಿಂದೆ ಆದ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆಗೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ತರಬೇತಿ:
ಸರ್ಕಾರ ನರ್ಸಿಂಗ್ ಸಂಖ್ಯೆ ಹೆಚ್ಚು ಮಾಡಲು ತೀರ್ಮಾನ ತೆಗೆದುಕೊಂಡಿದ್ದು, ಪ್ಯಾರಾ ಮೆಡಿಕಲ್ ಮಾಡುವವರಿಗೆ ಟ್ರೈನಿಂಗ್ ನೀಡಲು ಚಿಂತಿಸಲಾಗಿದೆ. 18 ಸಾವಿರ ವಿದ್ಯಾರ್ಥಿಗಳು ಇದ್ದು, ಅವರನ್ನೂ ಇದಕ್ಕೆ ಬಳಕೆ ಮಾಡಲು ಸಿದ್ಧತೆ ನಡೆಯುತ್ತಿದೆ ಅಂತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಚಲನಚಿತ್ರ ಮಂಡಳಿ ಪದಾಧಿಕಾರಿಗಳಿಗೆ ಡಿಕೆಶಿ ಮನವಿ