ಬೆಂಗಳೂರು: ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ರಿಜಿಸ್ಟರ್ ಮಾಡುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದ ಆರೋಪದಡಿ ಸರ್ಕಾರದ ಮಹಿಳಾ ಅಧಿಕಾರಿ ಸೇರಿದಂತೆ ನಾಲ್ವರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರಿನ ಮೂರು ಕಡೆ ಹಾಗೂ ತುಮಕೂರು ಸೇರಿದಂತೆ ನಾಲ್ಕು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಹೆಲ್ತ್ ಲೇಔಟ್ನಲ್ಲಿರುವ ರಾಜಸ್ವ ನಿರೀಕ್ಷಕರಾದ ಬಿ.ಕೆ. ಆಶಾ, ಖಾಸಗಿ ವ್ಯಕ್ತಿಗಳಾದ ಪಿ.ಎಸ್.ಆರ್.ಪ್ರಸಾದ್, ಕೆ.ವಿ. ನಾಯ್ಡು ಸೇರಿ ಒಟ್ಟು ನಾಲ್ವರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಚಿಕ್ಕಬೆಟ್ಟಹಳ್ಳಿಯ ಜಮೀನಿಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳು ಯಲಹಂಕದ ಚಿಕ್ಕಬೆಟ್ಟಹಳ್ಳಿಯ ಗೋಮಾಳ ಜಮೀನಿನಲ್ಲಿ 1968ರಿಂದ ವ್ಯವಸಾಯ ಮಾಡಿಕೊಂಡು ಬಂದವರಿಗೆ ಸಾಗುವಳಿ ಚೀಟಿ ನೀಡಿಲ್ಲ. ಗೋಮಾಳ ಜಮೀನಿನ ಮೂಲ ಮಂಜೂರಾತಿ ಕಡತವೂ ತಾಲೂಕು ಕಚೇರಿಯಲ್ಲಿ ಲಭ್ಯವಿರಲಿಲ್ಲ.
ಸರ್ಕಾರಿ ಜಮೀನು ಪರಭಾರೆ ನಿಷಿದ್ಧ ಎಂದು ನ್ಯಾಯಾಲಯ ಆದೇಶಿಸಿದ್ದರೂ ಕೋರ್ಟ್ ಆದೇಶ ಉಲ್ಲಂಘಿಸಿ ಯಲಹಂಕ ತಾಲೂಕು ಕಚೇರಿಯ ಅಧಿಕಾರಿಗಳು ಅಕ್ರಮ ದಾಖಲೆ ಸೃಷ್ಟಿಸಿ, ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ರಿಜಿಸ್ಟರ್ ಮಾಡಿಸಿದ್ದರು. ಈ ಮೂಲಕ ಸರ್ಕಾರಿ ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ನಷ್ಟ ಉಂಟುಮಾಡಿರುವ ಬಗ್ಗೆ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಸದ್ಯ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.