ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ರಾತ್ರಿ-ಹಗಲು ಸೇವೆ ಸಲ್ಲಿಸುತ್ತಿರುವ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಪ್ರಕರಣ ಸಂಬಂಧಿಸಿದಂತೆ ಸ್ಥಳ ಮಹಜರು ಮಾಡಿಸುವಾಗ ಮತ್ತೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ಆರೋಪಿ ಕಾಲಿಗೆ ಗುಂಡು ಹೊಡೆಯಲಾಗಿದೆ.
ತಝೌಧೀನ್ ನಿನ್ನೆ ಗಸ್ತಿನಲ್ಲಿದ್ದ ಪೇದೆ ಕಪಾಳಕ್ಕೆ ಬಾರಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದ. ನಂತರ ಆತನನ್ನು ಪೊಲೀಸರು ಬಂಧಿಸಿದ್ದರು. ಹೀಗಾಗಿ ಇಂದು ಮುಂಜಾನೆ ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದ ಸಂದರ್ಭದಲ್ಲಿ ಆರೋಪಿ, ಪಿಎಸ್ಐ ರೂಪ ಹಾಗೂ ಕಾನ್ಸ್ಟೇಬಲ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ತಕ್ಷಣ ಸಂಜಯ್ ನಗರ ಇನ್ಸ್ಪೆಕ್ಟರ್ ಬಾಲಾಜಿ ಶರಣಾಗುವಂತೆ ತಿಳಿಸಿದ್ದಾರೆ. ಆದರೆ, ಹಲ್ಲೆ ನಡೆಸಿ ಪರಾರಿಯಾಗಲು ಮುಂದಾದ. ಇನ್ಸ್ಪೆಕ್ಟರ್, ಆರೋಪಿ ಕಾಲಿಗೆ ಗುಂಡು ಹಾರಿಸಿದರು. ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ: ಲಾಕೌಡೌನ್ ಹಿನ್ನೆಲೆಯಲ್ಲಿ ರಾಜಧಾನಿಯ ರಸ್ತೆಗಳಲ್ಲಿ ತ್ರಿಬಲ್ ರೈಡಿಂಗ್ ವ್ಹೀಲಿಂಗ್ ಮಾಡುತ್ದಿದ್ದ ಮಾಹಿತಿ ಮೇರೆಗೆ ಸಂಜಯನಗರ ಪೇದೆಗಳಾದ ಮಂಜುನಾಥ ಮತ್ತು ಬಸವರಾಜು ತೆರಳಿದ್ದರು. ಈ ವೇಳೆ ಆರೋಪಿಗಳನ್ನ ಹಿಡಿಯಲು ಹೋದಾಗ ಪೇದೆಗಳ ಮೇಲೆ ನಿನ್ನೆ ಸಂಜೆ ಹಲ್ಲೆ ನಡೆಸಿದ್ದರು.