ನೆಲಮಂಗಲ : ಅಡವಿಟ್ಟ ಚಿನ್ನಾಭರಣ ಬಿಡಿಸಲು ಗೋಲ್ಡ್ ಕಂಪನಿಂದ ಹಣ ತೆಗೆದುಕೊಂಡು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ವಂಚಕನನ್ನ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಪಿಣ್ಯ ಎರಡನೇ ಹಂತದ ನಿವಾಸಿ ನರೇಶ್ ಅಲಿಯಾಸ್ ನರಿ ( 26) ಬಂಧಿತ ಆರೋಪಿ. ಪುಡ್ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ನರೇಶ್ ಶೋಕಿ ಜೀವನ ವ್ಯಾಮೋಹದಿಂದ ಕ್ಷಣದಲ್ಲಿ ದುಡ್ಡು ಮಾಡಲು ಅಡ್ಡದಾರಿ ತುಳಿದಿದ್ದ. ಚಿನ್ನದಂಗಡಿ ಜಾಹೀರಾತುಗಳಲ್ಲಿರುವ ಕಸ್ಟಮರ್ ಕೇರ್ ನಂಬರ್ಗೆ ಕರೆ ಮಾಡಿ ನನ್ನ ಚಿನ್ನಾಭರಣ ಅಡವಿಟ್ಟಿದ್ದೇನೆ ಬಿಡಿಸಿಕೊಳ್ಳಲು ಹಣ ಕೊಡಿ ಎಂದು ಕೇಳಿದ್ದ.
ಹಿಂದೂಸ್ಥಾನ್ ಗೋಲ್ಡ್ ಕಂಪನಿಗೆ ಪೋನ್ ಮಾಡಿದ ಆರೋಪಿ, ಮಾದನಾಯಕನಹಳ್ಳಿಯ ಮಣಪ್ಪುರಂ ಗೋಲ್ಡ್ ಫೈನಾನ್ಸ್ ಕಂಪನಿಯಲ್ಲಿ 30 ಗ್ರಾಂ ಚಿನ್ನಾಭರಣ ಅಡವಿಟ್ಟಿದ್ದೇನೆ, ಬಿಡಿಸಿಕೊಳ್ಳಲು ಹಣ ಕೊಡಿ . ನೀವು ಒಡವೆಗಳನ್ನ ಅನ್ಲೈನ್ನಲ್ಲಿ ಮಾರಿ ಎಂದು ಮನವಿ ಮಾಡಿದ್ದ. ಅದರಂತೆ ಹಿಂದೂಸ್ಥಾನ್ ಗೋಲ್ಡ್ ಕಂಪನಿಯವರು ಆಫೀಸ್ಗೆ ಬರುವಂತೆ ಹೇಳಿದ್ದರು. ಸೂಟ್ ಬೂಟ್ ಹಾಕಿಕೊಂಡು ಥೇಟ್ ಮಧುಮಗನಂತೆ ಹೋಗಿದ್ದ ನರೇಶ್ನನ್ನು ನೋಡಿದ ಕಂಪನಿಯವರು ಶ್ರೀಮಂತ ಕುಳ ಅಂತ ನಂಬಿದ್ದರು.
30 ಗ್ರಾಂ ಚಿನ್ನಾಭರಣ ಬಿಡಿಸಲು ನರೇಶ್ಗೆ 1 ಲಕ್ಷ ರೂ. ಹಣ ಕೊಟ್ಟು ಜೊತೆಗೆ ಮಂಜುನಾಥ್ ಎಂಬ ಹುಡುಗನನ್ನು ಕಳುಹಿಸಿದ್ದರು. ಮಣಪ್ಪುರಂ ಗೋಲ್ಡ್ ಫೈನಾನ್ಸ್ ಕಂಪನಿಗೆ ಹೋಗಿ ಚಿನ್ನಾಭರಣ ಬಿಡಿಸಿಕೊಂಡ ನರೇಶ್ ಕೆಲವೇ ನಿಮಿಷದಲ್ಲಿ ಬರುವುದಾಗಿ ಹೇಳಿ ಹೋಗಿದ್ದ. ಆದರೆ, ಎಷ್ಟೇ ಹೊತ್ತಾದರೂ ನರೇಶ್ ವಾಪಸ್ ಬರಲಿಲ್ಲ.
ಜೊತೆಗೆ ಹೋಗಿದ್ದ ಮಂಜುನಾಥ್ ಮ್ಯಾನೇಜರ್ಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾನೆ. ಮೋಸಕ್ಕೆ ಒಳಗಾದ ಹಿಂದೂಸ್ಥಾನ್ ಗೋಲ್ಡ್ ಕಂಪನಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸದ್ಯ ವಂಚಕ ನರೇಶನನ್ನ ಪತ್ತೆ ಮಾಡಿದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.