ಬೆಂಗಳೂರು : ಚಾಲಕನನ್ನ ವರ್ಗಾವಣೆಗೊಳಿಸಿ ಅದೇಶ ಹೊರಡಿಸಿದ್ದ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಆರೋಪಿಯನ್ನ ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗೋವಿಂದರಾಜು ಬಂಧಿತ ಆರೋಪಿ.
ಸರ್ವೇ ಸೆಟಲ್ಮೆಂಟ್ ಹಾಗೂ ಲ್ಯಾಂಡ್ ರೆಕಾರ್ಡ್ಸ್ ಕಮಿಷನರ್ ಆಗಿರುವ ಮುನೀಶ್ ಮೌದ್ಗಿಲ್ ಇತ್ತೀಚಿಗೆ ಆಡಳಿತಾತ್ಮಕ ಕಾರಣಗಳಿಗಾಗಿ ತಮ್ಮ ಚಾಲಕ ಆನಂದ್ ಎಂಬುರನ್ನು ಕೋಲಾರಕ್ಕೆ ವರ್ಗಾವಣೆಗೊಳಿಸಿದ್ದರು. ಅದೇ ದಿನ ರಾತ್ರಿ ಮುನೀಶ್ ಅವರಿಗೆ ಕರೆ ಮಾಡಿದ್ದ ಆರೋಪಿ, "ತಾನು ಅಬಕಾರಿ ಸಚಿವ ಗೋಪಾಲಯ್ಯನವರ ಆಪ್ತ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ನಂತರ ಆನಂದ್ರನ್ನು ಯಾಕೆ ವರ್ಗಾವಣೆ ಮಾಡಿದ್ದೀರಿ?, ತಕ್ಷಣವೇ ವರ್ಗಾವಣೆ ಆದೇಶ ರದ್ದು ಮಾಡಿ" ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದರಂತೆ.
ಈ ಕುರಿತು ಮುನೀಶ್ ಮೌದ್ಗಿಲ್ ಅವರು ಗೋಪಾಲಯ್ಯನವರ ಆಪ್ತ ಕಾರ್ಯದರ್ಶಿ ರಾಮೇಗೌಡರಿಗೆ ಮಾಹಿತಿ ತಿಳಿಸಿ ಬಳಿಕ ಸಂಪಿಗೇಹಳ್ಳಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆನಂದ್ ಸಂಬಂಧಿ ಗೋವಿಂದರಾಜು ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿರುವುದಾಗಿ ಈಶಾನ್ಯ ವಿಭಾಗದ ಡಿಸಿಪಿ ಡಾ.ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ: ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತರಾಗಿ ಮುನೀಶ್ ಮೌದ್ಗಿಲ್ ಮರು ವರ್ಗಾವಣೆ