ಬೆಂಗಳೂರು: ಕುಟುಂಬ ಕಲಹಕ್ಕೆ ಬೇಸತ್ತು ಹೈಕೋರ್ಟ್ ಧ್ವಂಸಗೊಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಆರೋಪಿ ವಿಧಾನಸೌಧ ಪೊಲೀಸರ ಅತಿಥಿಯಾಗಿದ್ದಾನೆ. ಉತ್ತರ ಪ್ರದೇಶದ ಕಾನ್ಪುರದ ನಿವಾಸಿ ರಾಜೇಂದ್ರ ಸಿಂಗ್ ಬಂಧಿತ ಆರೋಪಿ.
ಹೈಕೋರ್ಟ್ನ ರಿಜಿಸ್ಟ್ರಾರ್ಗೆ ಹರ್ ದರ್ಶನ್ ಸಿಂಗ್ ಎಂಬ ಹೆಸರಿನಲ್ಲಿ ಪತ್ರವೊಂದನ್ನು ರವಾನಿಸಿದ್ದ ಆರೋಪಿ ತಾನು ಅಂತಾರಾಷ್ಟ್ರೀಯ ಖಲಿಸ್ತಾನ್ ಗುಂಪಿಗೆ ಸೇರಿದವ. ಹೈಕೋರ್ಟ್ ಮೇಲೆ ದಾಳಿ ನಡೆಸಿ, ಸ್ಫೋಟಗೊಳಿಸುತ್ತೇನೆ ಎಂದು ಪತ್ರದ ಮೂಲಕ ಬೆದರಿಕೆ ಹಾಕಿದ್ದ. ಆರೋಪಿಯ ಜಾಡು ಹಿಡಿದು ದೆಹಲಿಗೆ ತೆರಳಿದ್ದ ಪೊಲೀಸರು ಅಲ್ಲಿ ಹರ್ ದರ್ಶನ್ ಸಿಂಗ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ತನ್ನ ಅಳಿಯ ಕುಟುಂಬ ಕಲಹದಿಂದ ಬೇಸತ್ತು ಈ ರೀತಿಯ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಆತನ ಮಾವ ಬಾಯ್ಬಿಟ್ಟಿದ್ದರು. ಬಳಿಕ ಆರೋಪಿ ರಾಜೇಂದ್ರ ಸಿಂಗ್ ಬೆನ್ನಟ್ಟಿದ ಪೊಲೀಸರು, ಆತನಿಗೆ ಕೈಕೋಳ ತೊಡಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ತನಿಖೆಯಲ್ಲಿ ಬಟಾಬಯಲು: ಚನ್ನೈ ಪೊಲೀಸರ ವಶದಲ್ಲಿರುವ ರಾಜೇಂದ್ರ ಸಿಂಗ್ನನ್ನು ಬಾಡಿ ವಾರೆಂಟ್ ಮೂಲಕ ಕರೆದು ತಂದಿರುವ ಬೆಂಗಳೂರು ಪೊಲೀಸರು ವಿಚಾರಣೆಗೊಳಪಡಿಸಿ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಲ್ಲದೆ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ನಡೆದಿರುವುದೇನು?: ಈತ ಉತ್ತರ ಪ್ರದೇಶದ ನಿವಾಸಿ. ಅಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಲೀಗಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಹರ್ ದರ್ಶನ್ ಸಿಂಗ್ ಪುತ್ರಿ ಸುಮಿತಾ ಕೌರ್ ಎಂಬಾಕೆಯನ್ನು ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದ. ಆದರೆ, 6 ತಿಂಗಳ ಹಿಂದೆ ಕ್ಷುಲ್ಲಕ ಕಾರಣಕ್ಕಾಗಿ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳ ಮಾಡಿಕೊಂಡಿದ್ದರು. ಆರೋಪಿಯ ಪತ್ನಿ ಸುಮಿತಾ ತನ್ನ ತಂದೆಯೊಂದಿಗೆ ತವರು ಮನೆಗೆ ಹೋಗಿದ್ದರು. ಹೀಗಾಗಿ ಮಾವನ ಮೇಲಿನ ಕೋಪಕ್ಕೆ ಮಾವನ ಹೆಸರಿನಲ್ಲಿ ಚನ್ನೈ, ಕೋಲ್ಕತ್ತಾ, ಮುಂಬೈ, ಬೆಂಗಳೂರಿನ ಹೈಕೋರ್ಟ್ಗಳ ರಿಜಿಸ್ಟ್ರಾರ್ಗಳಿಗೆ ಏಕಕಾಲಕ್ಕೆ ಪತ್ರ ಕಳುಹಿಸಿ ಬೆದರಿಕೆ ಹಾಕಿದ್ದ ಎಂಬ ವಿಚಾರ ತನಿಖೆಯಿಂದ ತಿಳಿದು ಬಂದಿದೆ.