ಬೆಂಗಳೂರು: ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆಂಧ್ರ ಪ್ರದೇಶ ಮೂಲದ ವಿದ್ಯಾರ್ಥಿವೋರ್ವನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಮೂಲದ ವಿಕೃತ್ ರಾಜ್(27) ಬಂಧಿತ ಆರೋಪಿ. ಈತನಿಂದ 1 ಕೆಜಿ 200 ಗ್ರಾಂ ತೂಕದ ಮಾದಕ ದ್ರವ್ಯ ಹಾಗೂ 3 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯು ಬಿ.ಕಾಂ ವಿದ್ಯಾರ್ಥಿಯಾಗಿದ್ದು, ಸಿ.ಎ. ಕೋರ್ಸ್‌ಗಾಗಿ ಅರ್ಜಿ ಸಲ್ಲಿಸಿ ಸಿ.ಎ ವಿದ್ಯಾಭ್ಯಾಸ ಮಾಡುತ್ತಿದ್ದ.
ಚಾರ್ಟೆಡ್ ಅಕೌಂಟೆಂಟ್ ಕಚೇರಿಯಲ್ಲಿ ಕೆಲಸ ನಿರ್ವಹಿಸಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಹಲವಾರು ವಿದ್ಯಾರ್ಥಿಗಳನ್ನು ಮತ್ತು ಸಾರ್ವಜನಿಕರನ್ನು ಪರಿಚಯ ಮಾಡಿಕೊಂಡು ಆಂಧ್ರಪ್ರದೇಶದ ಗುಂಟೂರಿನಿಂದ ತನ್ನ ಸಹಚರ ಪ್ರವೀಣ್ ಎಂಬುವನಿಂದ ಮಾದಕ ವಸ್ತು ಗಾಂಜಾದಿಂದ ತಯಾರಿಸಿದ ಎಣ್ಣೆಯನ್ನು ಕೆ.ಜಿ ಗೆ 5 ರಿಂದ 6 ಲಕ್ಷ ರೂ. ವರೆಗೆ ಬೆಂಗಳೂರು ನಗರದ ಕೋರಮಂಗಲ, ಎಸ್.ಜಿ.ಪಾಳ್ಯ, ಹೆಚ್.ಎಸ್.ಆರ್ ಲೇಔಟ್, ಜಯನಗರ, ಜೆ.ಪಿ.ನಗರ ಮತ್ತು ಇತರೆ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ತನ್ನ ಪರಿಚಯಸ್ಥ ಗ್ರಾಹಕರಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.