ಬೆಂಗಳೂರು: ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ಸರ್ಕಾರ ತಂದಿರುವ ತಿದ್ದುಪಡಿಯಿಂದ ಉಂಟಾಗುವ ಪರಿಣಾಮಗಳ ಕುರಿತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಿರಿಯ ನ್ಯಾಯವಾದಿಗಳು ಹಾಗೂ ಕಾನೂನು ತಜ್ಞರ ಜೊತೆ ಸಭೆ ನಡೆಸಿದರು.
ಕಳೆದ ವಾರ ತಮ್ಮ ನಿವಾಸದಲ್ಲಿ ದಲಿತ ಸಂಘಟನೆಗಳು ಹಾಗೂ ರೈತ ಮುಖಂಡರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದರು. ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಂದಿರುವ ಭೂ ಸುಧಾರಣಾ ಕಾಯ್ದೆ ಸರ್ವ ರೀತಿಯಲ್ಲೂ ಜನ ವಿರೋಧಿಯಾಗಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಮುಂದಿನ ದಿನಗಳಲ್ಲಿ ಈ ಕಾಯ್ದೆಯ ವಿರುದ್ಧ ಕಾಂಗ್ರೆಸ್ ಹೋರಾಡಲು ಯಾವ ರೀತಿಯ ಸಿದ್ಧತೆ ಕೈಗೊಳ್ಳಬಹುದು. ಕಾನೂನಿನಲ್ಲಿ ಇದಕ್ಕೆ ಯಾವ ರೀತಿಯ ಅವಕಾಶಗಳು ಇವೆ ಎಂಬುದನ್ನು ತಿಳಿದುಕೊಳ್ಳುವ ಕಾರ್ಯವನ್ನು ಈ ಸಭೆಯಲ್ಲಿ ಸಿದ್ದರಾಮಯ್ಯ ಮಾಡಿದರು.
ಸಭೆಯಲ್ಲಿ ಕಾನೂನು ತಜ್ಞರ ಜೊತೆ ಮಾತನಾಡಿದ ಅವರು, ಇದೊಂದು ರಾಜ್ಯದ ಪಾಲಿಗೆ ಕರಾಳ ಶಾಸನವಾಗಿದೆ. ರೈತರನ್ನು ಬೀದಿಗೆ ತಳ್ಳಲು ಸರ್ಕಾರ ಹೊರಟಿದೆ. ಆರ್ಥಿಕ ಪರಿಸ್ಥಿತಿ ಬುಡಮೇಲಾಗುತ್ತದೆ. ಈ ಹಿನ್ನೆಲೆ ಇಂತಹ ಕಾನೂನನ್ನ ಪ್ರತಿಪಕ್ಷವಾಗಿ ನಾವು ಖಂಡಿಸಲೇಬೇಕಿದೆ. ಇದರ ವಿರುದ್ಧ ಚಳವಳಿ ಆರಂಭಿಸಲು ತೀರ್ಮಾನಿಸಿದ್ದು, ಇದಕ್ಕೆ ಕಾನೂನಿನಲ್ಲಿ ಯಾವ ರೀತಿ ಸಹಕಾರ ಸಿಗಬಹುದು ಎಂಬುದನ್ನು ತಿಳಿದುಕೊಳ್ಳಲು ನಿಮ್ಮನ್ನ ಕರೆಸಿದ್ದೇನೆ ಎಂದಿದ್ದಾರೆ.
13 ಸಾವಿರಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಾಲಯದಲ್ಲಿ ವರದಿಯ ಪ್ರಕಾರ 1.7 ಲಕ್ಷ ಎಕರೆ ಜಮೀನು ವ್ಯಾಜ್ಯಗಳಿಗೆ ಸಂಬಂಧಿಸಿವೆ. ಎಕರೆಗೆ 50 ಲಕ್ಷ ಅಂದಾಜು ಮಾಡಿಕೊಂಡರು 70-80 ಕೋಟಿ ರೂಪಾಯಿ ಮೌಲ್ಯದ ಜಮೀನು ಇವಾಗಿವೆ. ಎಲ್ಲಾ ಜಮೀನುಗಳು ಖರೀದಿ ಮಾಡಿರುವವರ ವಿರುದ್ಧವಾಗಿದ್ದು, ಸರ್ಕಾರ ಯಾವುದೇ ಸಂದರ್ಭದಲ್ಲಿಯೂ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.
ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿಯಿಂದಾಗಿ ಕೇಸುಗಳನ್ನು ಕೂಡ ಅವರು ವಜಾ ಮಾಡಬಹುದಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಹಣ ಉಳ್ಳವರ ಪಾಲಾಗಲಿದೆ. ಅದನ್ನು ತಪ್ಪಿಸಿ ಜಮೀನು ರೈತರ ಬಳಿಯೇ ಉಳಿಯುವಂತೆ ಮಾಡಲು ನಾವು ಅಗತ್ಯ ಬಿದ್ದರೆ ಕಾನೂನು ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ವೇಳೆ ಹಿರಿಯ ನ್ಯಾಯವಾದಿಗಳು ಹಾಗೂ ಕಾನೂನು ತಜ್ಞರು ತಮಗೆ ಅರಿವಿರುವ ಹಲವು ಮಾಹಿತಿಗಳು ಹಾಗೂ ಕಾನೂನಿನ ಕಟ್ಟಳೆಗಳ ಕುರಿತು ಸಿದ್ದರಾಮಯ್ಯಗೆ ವಿವರಿಸಿದರು.