ಬೆಂಗಳೂರು: ಪಾಗಲ್ ಪ್ರೇಮಿಯ ಕಾಟಕ್ಕೆ ಹೆದರಿ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ದೊಡ್ಡ ಬೀದರಕಲ್ಲುನಲ್ಲಿ ನಡೆದಿದೆ. ಮಾನಸಾ (ಹೆಸರು ಬದಲಿಸಲಾಗಿದೆ) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಅರುಣ್ ಎನ್ನುವ ಪಾಗಲ್ ಪ್ರೇಮಿಯ ಬೆದರಿಕೆಯಿಂದಾಗಿ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ.
ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಅರುಣ್ ಪೀಡಿಸುತ್ತಿದ್ದನಂತೆ. ಅಷ್ಟೇ ಅಲ್ಲ ತನ್ನ ಸ್ನೇಹಿತ ಗೋಪಾಲ್ ಎಂಬಾತನ ಮೂಲಕ ಯುವತಿಯ ಮಾವ ಪ್ರಜ್ವಲ್ಗೆ ಫೋನ್ ಮಾಡಿಸಿ, ಬಸವೇಶ್ವರ ನಗರ ಪೊಲೀಸ್ ಸ್ಟೇಷನ್ನಿಂದ ಫೋನ್ ಮಾಡುತ್ತಿದ್ದೇನೆ. ಮಾನಸಾಳನ್ನು ಅರುಣ್ಗೆ ಮದುವೆ ಮಾಡಿಕೊಡದಿದ್ದರೆ, ಅರುಣ್ ಸೂಸೈಡ್ ಮಾಡಿಕೊಳ್ಳುತ್ತಾನೆ. ಆಗ ನಿಮ್ಮ ಮೇಲೆ ಎಫ್ಐಆರ್ ದಾಖಲಾಗುತ್ತದೆ ಎಂದು ಹೆದರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬೆಳವಣಿಗೆಯಿಂದ ಮನನೊಂದ ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಪೋಷಕರು ದೂರು ನೀಡಿದ್ದು, ಸದ್ಯ ಉತ್ತರ ವಿಭಾಗದ ಪೀಣ್ಯ ಪೊಲೀಸ್ ಸಿಬ್ಬಂದಿ ಅರುಣ್ ಮತ್ತು ಗೋಪಾಲ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನ ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿಯಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು ಎಂದು ಮಾಹಿತಿ ನೀಡಿದ್ದಾರೆ.