ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಸಂಚಾರ ಮಾಡುವ ದ್ವಿಚಕ್ರ ವಾಹನದ ಹಿಂಬದಿ ಸವಾರ ಪೋರಿ ಹೆಲ್ಮೆಟ್ ಧರಿಸದೆ ಅಡ್ಡಗಟ್ಟಿದ ಪೊಲೀಸರಿಗೆ ತಪ್ಪೇ ಮಾಡದವ್ರ್ಯಾರವ್ರೇ.. ತಪ್ಪೇ ಮಾಡದವ್ರ್ಯಾರವ್ರೇ.. ಅಂತ ಥಮ್ಸ್ ಅಪ್ ಮಾಡಿ 36 ಸಂಚಾರಿ ನಿಯಮ ಉಲ್ಲಂಘಿಸಿ 18,000 ರೂಪಾಯಿ ದಂಡ ಕಟ್ಟದೆ ಸಂಚಾರಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ ಬೆಂಗಳೂರಿನ ಜೋಡಿ.
ಪೊಲೀಸರು ಬೈಕ್ ಅಡ್ಡ ಹಾಕಿದಾಗ ಥಮ್ಸ್ ಅಪ್ ಮಾಡಿ ಪರಾರಿಯಾಗುವ ಈ ಪೋರಿಗಾಗಿ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಹುಡುಕಾಡಿ ಹೈರಾಣಾಗಿದ್ದಾರೆ. ಅದರಲ್ಲೂ ರಾಜ್ಯಕ್ಕೆ ಮಾದರಿಯಾಗುವಂತಹ ಎಲೆಕ್ಟ್ರಾನಿಕ್ ಡಿಜಿಟಲ್ ತಂತ್ರಾಂಶಗಳ ಮುಖಾಂತರ ನಿಯಂತ್ರಣ ಮಾಡುವ 'ಎಲ್ಸಿಟಾ' ಕೈಗೂ ಸಿಗದೆ ಪದೇ ಪದೇ ಪರಾರಿಯಾಗುತ್ತಿರುವ ಈ ಜೋಡಿಗೆ ಪೊಲೀಸರು ಬಲೆ ಬೀಸಿದ್ದಾರೆ.
KA-03.JW-4454 ನಂಬರಿನ ದ್ವಿಚಕ್ರ ವಾಹನದಲ್ಲಿ ಹತ್ತಾರು ಬಾರಿಯಲ್ಲ, ಬರೋಬ್ಬರಿ 36 ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಮುಲೈ ತೆಂಡ್ರಲ್ ಎಂಬುವರ ಹೆಸರಿನಲ್ಲಿ ಇರುವ ಬೈಕ್ ಇದಾಗಿದ್ದು, ಹೆಚ್.ಎಸ್.ಆರ್ ಬಡಾವಣೆ, ಸೋಮಸುಂದರ್ ಪಾಳ್ಯ, ಹೊಸಪಾಳ್ಯ, ಹೊಸರೋಡ್ ವ್ಯಾಪ್ತಿಯಲ್ಲಿ ಓಡಾಟ ನಡೆಸುವ ಬೈಕ್‌ನಲ್ಲಿ ಕಳೆದ ಒಂದು ವರ್ಷದಿಂದ 36 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. 18,000 ರೂ. ದಂಡ ಕಟ್ಟ ಬೇಕಾಗಿರುವ ದ್ವಿಚಕ್ರವಾಹನ ಇದಾಗಿದ್ದರೂ ಈವರೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ ಎನ್ನುವುದೇ ಸವಾಲಾಗಿ ಪರಿಣಮಿಸಿದೆ.
ಇಬ್ಬರ ಸಮೇತ ಓಡಾಟ ಮಾತ್ರ ನಿಂತಿಲ್ಲವಾದರೂ ಪೊಲೀಸರು ಅಡ್ಡ ಹಾಕಿದರೆ ಥಮ್ಸ್ ಅಪ್ ಮಾಡಿ ಮುಗುಳ್ನಗೆಯಿಂದ ಪರಾರಿಯಾಗುವ ಈ ತುಂಟ ಪೋರಿ ಪೋರ ಹೆಲ್ಮೆಟ್ ಇಲ್ಲದೆ ಅಲೆದಾಡುತ್ತಿದ್ದಾರೆ. ಪೊಲೀಸರು ಬೆನ್ನಟ್ಟಿದರೆ ಸಾಕು, ಎಲ್ಲೆಂದರಲ್ಲಿ ಕ್ಷಣಾರ್ಧದಲ್ಲಿ ಪರಾರಿ ಆಗುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿಗೆ ಟ್ರಾಫಿಕ್ ಪೊಲೀಸರಿಂದ ಹೊಸ ಪ್ಲ್ಯಾನ್..