ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಲಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳ ಫಲಿತಾಂಶ ಜುಲೈ 20ರಂದು ಪ್ರಕಟಗೊಂಡಿತ್ತು. ಆದರೆ ಖಾಸಗಿ ಕಾಲೇಜುಗಳ ತಂತ್ರದಿಂದ ಬರೋಬ್ಬರಿ 762 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಅಂದಹಾಗೆ, ಈ 762 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶುಲ್ಕ ಕಟ್ಟಿಲ್ಲ ಹಾಗೂ ಆನ್ಲೈನ್ ಶಾಲೆಗೆ ಹಾಜರಾಗಿಲ್ಲ ಎಂದು ಖಾಸಗಿ ಕಾಲೇಜುಗಳು ಪರೀಕ್ಷೆಗೆ ನೋಂದಣಿಯೇ ಮಾಡಿಲ್ಲ. ಹೀಗಾಗಿ, ಈ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಕ್ಕಿಲ್ಲ. ಆದರೆ ದಾಖಲಾತಿ ಆಧಾರದ ಮೇಲೆ ಇವರಿಗೆ ಹಾಲ್ ಟಿಕೆಟ್ ಕಳಿಸಲಾಗಿತ್ತು.
ಪಿಯು ಬೋರ್ಡ್ ಮೊದಲು ಹಾಲ್ ಟಿಕೆಟ್ ನೀಡಿತ್ತು. ಆದರೆ ಕಾಲೇಜುಗಳು ಪರೀಕ್ಷೆಗೆ ನೋಂದಣಿ ಮಾಡದೇ ಎಸ್ಎಸ್ಎಲ್ಸಿ ಹಾಗೂ ಪಿಯು ಪ್ರಥಮ ವರ್ಷದ ಅಂಕ ಹಾಗೂ ಶೈಕ್ಷಣಿಕ ವರ್ಷದ ಹಾಜರಾತಿ ಅಂಕಗಳನ್ನ ನೀಡದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡದೇ ಫೇಲ್ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟ ಇಲಾಖೆ:
ಶುಲ್ಕ ಕಟ್ಟಿಲ್ಲ ಅಂತ ವಿದ್ಯಾರ್ಥಿಗಳ ಭವಿಷ್ಯ ಬಲಿ ಕೂಡಲು ಕಾಲೇಜುಗಳು ಮುಂದಾಗಿದ್ದವು. ಆದರೆ ಪದವಿ ಪೂರ್ವ ಕಾಲೇಜು ಇದನ್ನು ವಿಶೇಷ ಸಂದರ್ಭ ಅಂತ ಪರಿಗಣಿಸಿ ಒಟ್ಟು 762 ವಿದ್ಯಾರ್ಥಿಗಳಿಗೆ ಆಗಸ್ಟ್‌ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡು ಹಾಜರಾಗಲು ಅವಕಾಶ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್, Fees not paid ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಿರಲಿಲ್ಲ. ಈ ಎಲ್ಲ ವಿದ್ಯಾರ್ಥಿಗಳು ಕಾಲೇಜು ಶುರುವಾದಾಗ ದಾಖಲು ಮಾಡಿಕೊಂಡಿದ್ದು, ನಂತರ ಕಾರಣಾಂತರಗಳಿಂದ ಶುಲ್ಕ ಕಟ್ಟಿಲ್ಲ. ತರಗತಿಗಳಿಗೂ ಹಾಜರಾಗಿಲ್ಲ. ಈ 762 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶುಲ್ಕ ಪಾವತಿ ಬಾಕಿ ಇದ್ದರೆ ಅದನ್ನ ಪಾವತಿಸಿ ಕಾಲೇಜಿನಿಂದ ಅನುಮತಿ ಪಡೆದುಕೊಂಡು ಬಂದರೆ ಆಗಸ್ಟ್‌ನಲ್ಲಿ ಪರೀಕ್ಷೆಗೆ ಕೂರಬಹುದು ಎಂದರು.