ಬೆಂಗಳೂರು: ಅತಿಕ್ರಮಣಕಾರರಿಂದ ಆಸ್ತಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಮಂಗಳವಾರ ಸುಮಾರು 75 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದೆ.
ಬಿಡಿಎ ಜಾಗ ಅತಿಕ್ರಮ: ಬಿಟಿಎಂ ಬಡಾವಣೆಯ 4 ನೇ ಹಂತದ 2 ನೇ ಬ್ಲಾಕ್ನ ದೇವರಚಿಕ್ಕನಹಳ್ಳಿಯ ಸರ್ವೇ ಸಂಖ್ಯೆ 41 ರಲ್ಲಿ ಶಾಲಾ ಉದ್ದೇಶಕ್ಕಾಗಿ 23 ಗುಂಟೆ ಜಾಗ ಮತ್ತು ಇದೇ ಸರ್ವೇ ಸಂಖ್ಯೆಯಲ್ಲಿನ 36 1/2 ಗುಂಟೆ ಜಾಗವನ್ನು ಬಿಎಂಟಿಸಿ ಬಸ್ ಡಿಪೋಗೆ ಮಂಜೂರು ಮಾಡಲಾಗಿತ್ತು. ಆದರೆ, ಕಳೆದ ಒಂದು ದಶಕದಿಂದ ಖಾಸಗಿ ವ್ಯಕ್ತಿಗಳು ಈ ಎರಡೂ ಜಾಗಗಳನ್ನು ಅತಿಕ್ರಮಿಸಿಕೊಂಡು ಅಲ್ಲಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದರು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
ತೆರವು ಕಾರ್ಯಾಚರಣೆ: ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಮಾರ್ಗದರ್ಶನದಲ್ಲಿ ಬಿಡಿಎ ಕಾರ್ಯಪಾಲಕ ಅಭಿಯಂತರ ಸುರೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್ ಮತ್ತು ಬಿಡಿಎ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ನೇತೃತ್ವದಲ್ಲಿ ಶಾಲಾ ಉದ್ದೇಶಕ್ಕಾಗಿ ಮೀಸಲಿದ್ದ ಜಾಗವನ್ನು 10 ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್ಗಳು ಮತ್ತು ಅಂಗಡಿ ಮುಗ್ಗಟ್ಟುಗಳನ್ನು ಆರು ಜೆಸಿಬಿಗಳನ್ನು ಬಳಸಿ ತೆರವುಗೊಳಿಸಲಾಯಿತು ಎಂದು ಹೇಳಿದೆ.
ಓದಿ: ಬಿಡಿಎಯಿಂದ ಗುಡ್ ನ್ಯೂಸ್ : ಹೊಸ ನಿಯಮ ಜಾರಿ, ತೆರಿಗೆ ಪಾವತಿಗೆ ಡಿಸ್ಕೌಂಟ್!!
ತಾತ್ಕಾಲಿಕ ಶೆಡ್ ತೆರವು: ಬಿಎಂಟಿಸಿಗೆ ಮಂಜೂರು ಮಾಡಲಾಗಿದ್ದ ಜಾಗದಲ್ಲಿ ಇದ್ದ 10 ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್ಗಳು ಮತ್ತು ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿ ಸುಮಾರು ಒಂದೂಮುಕ್ಕಾಲು ಎಕರೆ ಜಾಗವನ್ನು ಮರುವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಬಿಡಿಎ ಮಾಹಿತಿ ನೀಡಿದೆ. ಈ ಎರಡೂ ಜಾಗಗಳ ಒಟ್ಟು ಮೌಲ್ಯ ಸುಮಾರು 75 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಒತ್ತುವರಿ ತೆರವು ಕಾರ್ಯ ಮುಂದುವರಿಕೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ವಿಧಾನಮಂಡಲದ ಅಧಿವೇಶನ ಮತ್ತು ಇನ್ನಿತರ ಕಾರಣಗಳಿಂದಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಕಾರ್ಯಾಚರಣೆಯನ್ನು ಪುನಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಿಡಿಎಗೆ ಸಾವಿರಾರು ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲು ಕ್ರಮ: ಬಿಡಿಎಗೆ ಸೇರಿದ ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಗುರುತಿಸಿದ್ದು, ಆಸ್ತಿಯನ್ನು ವಶಪಡಿಸಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿದೆ ಎಂದು ಹೇಳಿದ್ದಾರೆ.