ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗೆ ಜಪ್ತಿ ವಾರೆಂಟ್ ನೋಟಿಸ್ ಜಾರಿ ಮಾಡಿ ಬಾಕಿ ತೆರಿಗೆಯ ವಸೂಲಿಗೆ ಅಧಿಕಾರಿಗಳು ಮುಂದಾಗಿದ್ದಾರೆ.
ನಗರದಲ್ಲಿ ಬರೋಬ್ಬರಿ 3 ಲಕ್ಷ ಸುಸ್ತಿದಾರರಿದ್ದು, 652 ಕೋಟಿ ರೂಪಾಯಿ ಆಸ್ತಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ. ಸದ್ಯ ಪಾಲಿಕೆಯ ಕಂದಾಯ ವಿಭಾಗ ವಲಯ ಮತ್ತು ವಾರ್ಡ್ ಮಟ್ಟದಲ್ಲಿ ಟಾಪ್ 100 ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಸಿದ್ಧಪಡಿಸಿದ್ದಾರೆ. ತೆರಿಗೆ ವಸೂಲಿ ಮಾಡುವಂತೆ ಅಧಿಕಾರಿಗಳ ಸಭೆ ನಡೆಸಿ ಆಯುಕ್ತರು, ಆಡಳಿತಗಾರರು ಸೂಚಿಸಿದ್ದರು.
ವಲಯವಾರು ತಯಾರಿಸಿದ ಪಟ್ಟಿಯಂತೆ ಟಾಪ್ 100 ಮಂದಿ ಸುಸ್ತಿದಾರರು 130.91 ಕೋಟಿ ರೂ. ತೆರಿಗೆ ಬಾಕಿ ಉಳಿಸಿದ್ದಾರೆ. ಅಲ್ಲದೆ ತೆರಿಗೆ ಪಾವತಿಸದ ಮೂರು ಲಕ್ಷಕ್ಕಿಂತ ಹೆಚ್ಚು ಸುಸ್ತಿದಾರರಿದ್ದು, ಇದರಲ್ಲಿ 10-11 ವರ್ಷಗಳಿಂದಲೂ ತೆರಿಗೆ ಪಾವತಿಸದವರಿದ್ದಾರೆ. ಈಗಾಗಲೇ 22 ಸಾವಿರಕ್ಕಿಂತ ಹೆಚ್ಚು ಮಂದಿಗೆ ನೋಟಿಸ್ ಜಾರಿ ಮಾಡಿ ತೆರಿಗೆ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗ್ತಿದೆ ಎಂದು ಕಂದಾಯ ವಿಶೇಷ ಆಯುಕ್ತ ಬಸವರಾಜು ತಿಳಿಸಿದ್ದಾರೆ.
ವಲಯವಾರು ಟಾಪ್ 100 ಸುಸ್ತಿದಾರರ ವಿವರ:
ವಲಯ ಒಟ್ಟು ಮೊತ್ತ
ಮಹದೇವಪುರ- 27,90,31,615
ಪೂರ್ವ- 23,56,49,501
ಪಶ್ಚಿಮ- 23,74,65,491
ದಕ್ಷಿಣ. 14,53,53,983
ಯಲಹಂಕ. 17,56,14,550
ಬೊಮ್ಮನಹಳ್ಳಿ 10,78,24,462
ಆರ್ ಆರ್ ನಗರ. 6,78,10,690
ದಾಸರಹಳ್ಳಿ 6,03,73,458
ಒಟ್ಟು 1,30,91,23,750
ಬಿಬಿಎಂಪಿಯು 19.80 ಲಕ್ಷ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಿದ್ದು, ಆ ಪೈಕಿ ಆಯಾ ಹಣಕಾಸು ವರ್ಷದಲ್ಲಿ 12-13 ಲಕ್ಷ ಸ್ವತ್ತುಗಳಿಂದ ಮಾತ್ರ ತೆರಿಗೆ ಸಂಗ್ರಹವಾಗ್ತಿದೆ. 3 ಲಕ್ಷಕ್ಕೂ ಹೆಚ್ಚು ಖಾಲಿ ನಿವೇಶನಗಳಿಂದಲೂ ಆಸ್ತಿ ತೆರಿಗೆ ಬರುತ್ತಿಲ್ಲ. ಇನ್ನು 2020-21 ನೇ ಸಾಲಿನಲ್ಲಿ 3,500 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಇದ್ದು, ಈವರೆಗೆ 2030 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ.