ಬೆಂಗಳೂರು: ವಿವಿಧ ಠಾಣೆಗಳಲ್ಲಿ ರೈತರ ಮೇಲೆ ಹೂಡಲಾಗಿದ್ದ 51 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ಸು ಪಡೆಯಲು ಸಂಪುಟ ಸಭೆ ನಿರ್ಧರಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಹಾಸನ ಜಿಲ್ಲೆಯಲ್ಲಿ ಎತ್ತಿನ ಹೊಳೆ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತ ಲಿಂಗೇಶ್ ಮೇಲಿನ ಪ್ರಕರಣವನ್ನು ವಾಪಸ್ಸು ಪಡೆಯಲಾಗಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಕಳಸ ಬಂಡೂರಿ ಪ್ರತಿಭಟನಾಕಾರರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಮಂಡ್ಯ ಜಿಲ್ಲೆಯ ಕಾವೇರಿ ಹೋರಾಟಗಾರ ಮಾದೇಗೌಡರು ಸೇರಿ 35 ಮಂದಿ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ.
ದಾಸೋಹ ಯೋಜನೆಯಡಿ 351 ಸಂಸ್ಥೆಗಳಿಗೆ ಅಕ್ಕಿ ಮತ್ತು ಗೋಧಿ ವಿತರಿಸಲಾಗುತ್ತಿತ್ತು. ಇದನ್ನು ಖಾಸಗಿ ಶಾಲೆಗಳಿಗೆ ನಿರ್ಬಂಧಿಸಲಾಗಿತ್ತು. 32,700 ಮಕ್ಕಳಿಗೆ ಅಕ್ಕಿ ಗೋಧಿ ನೀಡಲಾಗುತ್ತಿದ್ದು, ಎಲ್ಲರಿಗೂ ಅಕ್ಕಿ, ಗೋಧಿ ಖರೀದಿಸಿ ಸಬ್ಸಿಡಿ ದರದಲ್ಲಿ ಕೊಡಲು 18 ಕೋಟಿ ರೂಪಾಯಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಸಂಪುಟ ಪ್ರಮುಖ ತೀರ್ಮಾನಗಳು:
- ಚುನಾವಣಾ ನಿರ್ವಾಚನಾ ನಿಲಯಕ್ಕೆ ಅನೆಕ್ಷರ್ ಕಟ್ಟಡ ನಿರ್ಮಾಣಕ್ಕೆ 13.50 ಕೋಟಿ ರೂ. ಅನುದಾನ
- ಶಿಕ್ಷಣ ಇಲಾಖೆಯಡಿ ನಲಿಕಲಿ ಕಾರ್ಯಕ್ರಮ ದಡಿ ಸರ್ಕಾರಿ ಶಾಲೆಯ 1-3 ತರಗತಿಯ ಕನ್ನಡ ಮಾಧ್ಯಮ ಹಾಗೂ 1-2 ಉರ್ದು ಮಾಧ್ಯಮ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ನೀಡಲು 27 ಕೋಟಿ ರೂ. ಅನುದಾನ
- 32.04 ಕೋಟಿ ರೂ. ಮೊತ್ತದಲ್ಲಿ 120 ಆಂಬುಲೆನ್ಸ್ ಖರೀದಿಗೆ ನಿರ್ಧಾರ
- ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆವರಣದಲ್ಲಿ ಬಾಲಕಿಯರ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕಾಗಿ 260 ಕೋಟಿ ರೂ. ಅನುದಾನ
- ಬೀದರ್ ಕಾರಾಗೃಹ ಸುಧಾರಣೆಗೆ 99.9 ಕೋಟಿ ರೂ. ಅನುದಾನ
- ಬೆಂಗಳೂರು ಕಾರಾಗೃಹದ ಎರಡನೇ ಹಂತದ ಅಭಿವೃದ್ಧಿಗಾಗಿ 10.56 ಕೋಟಿ ರೂ. ಅನುದಾನ
- ಎಸ್‌ಟಿ ಖಾಸಗಿ ಹಾಗು ಸರ್ಕಾರಿ ಐಟಿಐ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲು 7.30 ಕೋಟಿ ರೂ. ಅನುದಾನ
- 2015ರಲ್ಲಿ ಗೋಕರ್ಣದಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿಯವರ ವಿರುದ್ಧ ಅಶ್ಲೀಲ ಸಿಡಿ ಬಿಡುಗಡೆ ಮಾಡಿ ಅವರ ಘನತೆಗೆ ಧಕ್ಕೆ ತಂದವರ ವಿರುದ್ಧ ದಾಖಲಾಗಿದ್ದ ಪ್ರಕರಣ ವಾಪಸ್ಸು ಪಡೆಯಲು ಹಿಂದಿನ ಸರ್ಕಾರ ಮುಂದಾಗಿತ್ತು. ಆ ಪ್ರಕರಣವನ್ನು ಮುಂದುವರಿಸಲು ನಿರ್ಧಾರ
- ನಾಲ್ಕನೇ ಶನಿವಾರದ ರಜೆ ಅನ್ವಯವಾಗದ ಸರ್ಕಾರಿ ನೌಕರರಿಗೆ 15 ಸಾಂದರ್ಭಿಕ ರಜೆ ಮಂಜೂರು