ಬೆಂಗಳೂರು: ನಗರ ಪೊಲೀಸರಿಗೆ ವಿದೇಶಿ ಪ್ರಜೆಗಳು ತಲೆನೋವಾಗಿ ಪರಿಣಮಿಸಿದ್ದಾರೆ. ಕಾನೂನುಬಾಹಿರವಾಗಿ ನಗರದಲ್ಲಿ ನೆಲೆಯೂರಿದ್ದ ಆಫ್ರಿಕಾದ 13 ಮಹಿಳೆಯರಲ್ಲಿ ಐವರು ಮಹಿಳಾ ಸಾಂತ್ವನ ಕೇಂದ್ರದಿಂದ ಗೋಡೆ ಹಾರಿ ಎಸ್ಕೇಪ್ ಆಗಿದ್ದಾರೆ.
ವೀಸಾ, ಪಾಸ್‌ಪೋರ್ಟ್ ಅವಧಿ ಮೀರಿದರೂ ಈ ವಿದೇಶಿಯರು ನಗರದಲ್ಲಿ ಅಕ್ರಮವಾಗಿ ನೆಲೆಯೂರಿದ್ದರು. ಈ ಸಂಬಂಧ ಹೆಣ್ಣೂರು ಸೇರಿದಂತೆ ಪೂರ್ವ ವಿಭಾಗದ ಪೊಲೀಸರು 13 ಮಂದಿ ವಿದೇಶಿ ಮಹಿಳೆಯರನ್ನು ಬಂಧಿಸಿದ್ದರು. ಬಳಿಕ ಸಿದ್ದಾಪುರ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಬಂಧಿತರನ್ನು ಇರಿಸಲಾಗಿತ್ತು. ಆದ್ರೆ ಕಳೆದ ರಾತ್ರಿ ಐವರು ಸಾಂತ್ವನ ಕೇಂದ್ರದಿಂದ ಪರಾರಿ ಆಗಿದ್ದಾರೆ.
ಮೂವರು ಕಾಂಗೋ, ನೈಜಿರೀಯಾದ ಇಬ್ಬರು ಮಹಿಳೆಯರು ಮಧ್ಯರಾತ್ರಿ ಕುಡಿಯಲು ನೀರು ಕೇಳಿದ್ದಾರೆ. ಈ ವೇಳೆ ಬಾಗಿಲು ತೆಗೆದು ಭದ್ರತಾ ಸಿಬ್ಬಂದಿ ನೀರು ಕೊಟ್ಟಿದ್ದಾರೆ. ಇದೇ ಸಮಯವನ್ನು ದುರುಪಯೋಗ ಪಡಿಸಿಕೊಂಡು, ಸಿಬ್ಬಂದಿ ಕಣ್ತಪ್ಪಿಸಿ ಕಾಂಪೌಂಡ್ ಹಾರಿ ಕಾಲ್ಕಿತ್ತಿದ್ದಾರೆ.
ವಿದೇಶಿಯರನ್ನು ನೋಡಿಕೊಳ್ಳುವುದಕ್ಕಾಗಿಯೇ ಮೂರು ಪಾಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸ್ ಭದ್ರತೆ ನಡುವೆಯೂ ತಪ್ಪಿಸಿಕೊಂಡಿದ್ದಾರೆ. ಸಾಂತ್ವನ ಕೇಂದ್ರದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಗೋಡೆ ಹತ್ತುವಾಗ ಓರ್ವ ಮಹಿಳೆ ಆಯತಪ್ಪಿ ಬಿದ್ದು ಕಾಲು ಮುರಿದುಕೊಂಡಿದ್ದಾಳೆ. ಈ ಸಂಬಂಧ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಪೊಲೀಸರ ಮೇಲೆ ವಿದೇಶಿ ಪ್ರಜೆಗಳು ಹಲ್ಲೆ ನಡೆಸಿ, ದಾಂಧಲೆ ಮಾಡಿದ್ದರು. ಆ ಬಳಿಕ ಪೊಲೀಸರು ಅಕ್ರಮವಾಗಿ ನೆಲೆಸಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ಕೇಸ್: ಬಂಧಿತ ಆಫ್ರಿಕನ್ ಪ್ರಜೆಯಿಂದ ಡ್ರಗ್ಸ್ ಸೇವನೆ ಸಾಬೀತು