ಬೆಂಗಳೂರು : ಕೋವಿಡ್ ಹಿನ್ನೆಲೆ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸೋಂಕು ನಿರ್ವಹಣೆಗೆ ನೆರವು ನೀಡುವಂತೆ ಖುದ್ದು ಸರ್ಕಾರವೇ ಮನವಿ ಮಾಡುತ್ತಿದೆ. ಈ ಹಿನ್ನೆಲೆ ರಾಜ್ಯದ ನ್ಯಾಯಮೂರ್ತಿಗಳು ಹಾಗೂ ನ್ಯಾಯಾಲಯಗಳ ಸಿಬ್ಬಂದಿ ರಾಜ್ಯ ಸರ್ಕಾರಕ್ಕೆ 3.38 ಕೋಟಿ ರೂಪಾಯಿ ನೆರವು ನೀಡಿದ್ದಾರೆ.
ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ಹೈಕೋರ್ಟ್‌ನ ಎಲ್ಲ ಸಿಬ್ಬಂದಿ, ಎಲ್ಲಾ ಜಿಲ್ಲೆಗಳ ನ್ಯಾಯಾಂಗ ಅಧಿಕಾರಿಗಳು ಹಾಗೂ ನ್ಯಾಯಾಲಗಳ ಸಿಬ್ಬಂದಿ ಒಟ್ಟು 3,38,12,972 ರೂಪಾಯಿ ನೆರವನ್ನು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ನೀಡಿದ್ದಾರೆ.
ಹೈಕೋರ್ಟ್‌ನ ನ್ಯಾಯಮೂರ್ತಿಗಳು 11.60 ಲಕ್ಷ ನೆರವು ನೀಡಿದ್ದರೆ, ರಾಜ್ಯದ ನ್ಯಾಯಾಂಗ ಅಧಿಕಾರಿಗಳು ತಮ್ಮ ಮೂರು ದಿನಗಳ ವೇತನವಾದ 1.15 ಕೋಟಿ ರೂಪಾಯಿಯನ್ನು ಕೋವಿಡ್ ನಿರ್ವಹಣೆಗಾಗಿ ನೀಡಿದ್ದಾರೆ. ಇನ್ನು, ಹೈಕೋರ್ಟ್‌ನ ಸಿಬ್ಬಂದಿ 43,97 ಲಕ್ಷ ರೂಪಾಯಿ ನೆರವು ನೀಡಿದ್ದರೆ, ರಾಜ್ಯದ ಜಿಲ್ಲಾ ನ್ಯಾಯಾಲಯಗಳ ಸಿಬ್ಬಂದಿ 1.66 ಕೋಟಿ ರೂಪಾಯಿ ನೆರವು ಕೊಟ್ಟಿದ್ದಾರೆ.
ಹಾಗೆಯೇ ನ್ಯಾಯಾಂಗ ಇಲಾಖೆ ಮಲ್ಟಿಪರ್ಪಸ್ ಸಹಕಾರಿ ಸೊಸೈಟಿಯು ಒಂದು ಲಕ್ಷ ರೂಪಾಯಿಯನ್ನು ಸಿಎಂ ಕೋವಿಡ್ ಪರಿಹಾರ ನಿಧಿಗೆ ಸಮರ್ಪಿಸಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ಅವರು ಮಾಹಿತಿ ನೀಡಿದ್ದಾರೆ.