ಬೆಂಗಳೂರು : ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಗೆ ಬಂದ ಮೂವರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿ ಲಕ್ಷ್ಮೀಶ, ರಾಘವೇಂದ್ರ ಎಂಬಿಬ್ಬರು ತಮ್ಮ ಸ್ನೇಹಿತರ ಜೊತೆಗೂಡಿ ನಾಗರಭಾವಿಯ ರೆಸ್ಟೋರೆಂಟ್ಗೆ ತೆರಳಿ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿಕೊಂಡು ನಾಲ್ವರು ಎರಡು ಬೈಕಿನಲ್ಲಿ ಪ್ರತ್ಯೇಕವಾಗಿ ಬರುತ್ತಿದ್ದರು. ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸಿಕೊಂಡಿರಲಿಲ್ಲ.
ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಬಳಿ ಬರುವಾಗ ಕುಡಿದ ಮತ್ತಿನಲ್ಲಿ ವೇಗವಾಗಿ ಬೈಕ್ ಚಲಾಯಿದ್ದಾರೆ. ಬಳಿಕ ಒಂದು ಬೈಕ್ನವರು ನಿಯಂತ್ರಣ ಕಳೆದುಕೊಂಡು ರಸ್ತೆ ಡಿವೈಡರ್ಗೆ ಗುದ್ದಿದ್ದಾರೆ.
ಅಪಘಾತದ ರಭಸಕ್ಕೆ ತಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಬಿದ್ದಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರೂ ಕೂಡ ಪ್ರಯೋಜನವಾಗಲಿಲ್ಲ. ಇಬ್ಬರೂ ಕೂಡ ಸಾವನ್ನಪ್ಪಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸಾವನ್ನಪ್ಪಿದ ಬೈಕ್ ಸವಾರ : ಮತ್ತೊಂದು ಪ್ರಕರಣದಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ನಾಗರಭಾವಿ ರಿಂಗ್ ರಸ್ತೆಯ ಅಂಡರ್ ಪಾಸ್ ಬಳಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ. 38 ವರ್ಷದ ಭಾಸ್ಕರ ಎಂಬುವರು ಮೃತಪಟ್ಟಿದ್ದಾರೆ.
ವೇಗವಾಗಿ ಬೈಕ್ ಚಾಲನೆ ಮಾಡಿದ ಹಿನ್ನೆಲೆ ವಾಹನ ನಿಯಂತ್ರಣಕ್ಕೆ ಸಿಗದೆ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.