ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ನವೆಂಬರ್ 24 ರಿಂದ 26ರವರೆಗೆ ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡದೆ ಕೇವಲ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ.
ನವೆಂಬರ್ 24ರಂದು ಮೈಸೂರಿನಲ್ಲಿ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ ಬಿಎಸ್ವೈ, 25ರಂದು ಮೈಸೂರಿನಿಂದ ತಲಕಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.
ಅಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದು, ನಂತರ ಅಲ್ಲಿಂದ ಮುಡುಕುತೊರೆ ಮೂಲಕ ಮಹದೇಶ್ವರ ಬೆಟ್ಟಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಅಂದು ಸಂಜೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ಕೊಟ್ಟು ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ನಂತರ 26ರಂದು ಬೆಳಗ್ಗೆ ಮಹದೇಶ್ವರರಿಗೆ ಪೂಜೆ ಸಲ್ಲಿಸಿ, ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಸಭೆ ನಡೆಸುತ್ತಾರೆ. ಸಭೆ ನಂತರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಅಧಿಕಾರ ಹೋಗುತ್ತೆ ಎನ್ನುವ ಮೌಢ್ಯಕ್ಕೆ ಸಿಲುಕಿದ್ದಾರಾ ಸಿಎಂ?
ಚಾಮರಾಜನಗರದ ಜಿಲ್ಲಾ ಕೇಂದ್ರಕ್ಕೆ ತೆರಳದೆ ಮಲೆಮಹದೇಶ್ವರ ಬೆಟ್ಟಕ್ಕೆ ಮಾತ್ರ ಸಿಎಂ ಯಡಿಯೂರಪ್ಪ ಭೇಟಿ ನೀಡುತ್ತಿದ್ದಾರೆ. ಜಿಲ್ಲಾ ಕೇಂದ್ರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೇನೆ ಎನ್ನುವ ಮೌಢ್ಯಕ್ಕೆ ಯಡಿಯೂರಪ್ಪ ಕಟ್ಟುಬಿದ್ದಿದ್ದಾರೆ ಎನ್ನಲಾಗಿದೆ.
ಅಧಿಕಾರ ಕಳೆದುಕೊಳ್ಳುವ ಆತಂಕದ ಹಿನ್ನೆಲೆ ಕೇವಲ ಮಹದೇಶ್ವರ ಬೆಟ್ಟಕ್ಕೆ ಮಾತ್ರ ಭೇಟಿ ಕೊಟ್ಟು ವಾಪಸ್ ಆಗಲಿದ್ದಾರೆ ಎನ್ನಲಾಗಿದೆ.