ಬೆಂಗಳೂರು: ರಾಜ್ಯದ 1 ಲೋಕಸಭೆ, ನಾಲ್ಕು ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ನ 25 ಸ್ಥಾನಗಳಿಗೆ ನಡೆದ ಚುನಾವಣೆಗಳು ಈ ವರ್ಷದಲ್ಲಿ ಮೂರು ಪಕ್ಷಗಳಿಗೆ ಪ್ರಮುಖವಾಗಿದ್ದವು.
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಂತರ ನಡೆದರೆ, ಕಾಂಗ್ರೆಸ್ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರ ನಿಧನದಿಂದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ, ಇನ್ನು ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲರು ತಮ್ಮ ವಿಧಾನಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಮಸ್ಕಿ ಕ್ಷೇತ್ರಕ್ಕೆ 2021 ಏಪ್ರಿಲ್ 17 ರಂದು ಉಪಚುನಾವಣೆಗಳು ನಡೆದಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಈ ಕ್ಷೇತ್ರಗಳು ಪ್ರತಿಷ್ಠೆಯಾಗಿದ್ದವು.
ಸಂಸದ ಸ್ಥಾನಕ್ಕೆ ಟಿಕೆಟ್ ಫೈಟ್
ಕೇಂದ್ರ ರೈಲ್ವೆ ಸಚಿವ ದಿವಂಗತ ಸುರೇಶ್ ಅಂಗಡಿ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಟಿಕೆಟ್ಗಾಗಿ ಬಿಜೆಪಿ ಪಾಳಯದಲ್ಲಿ ಸಾಕಷ್ಟು ಪೈಪೋಟಿ ಶುರುವಾಗಿತ್ತು. ಟಿಕೆಟ್ಗಾಗಿ ಸಾಕಷ್ಟು ನಾಯಕರು ತೆರೆಮರೆಯ ಕಸರತ್ತು ನಡೆಸಿದ್ದರು. ಕೊನೆಗೆ ಅನುಕಂಪದ ಆಧಾರದ ಮೇಲೆ ಟಿಕೆಟ್ ಅನ್ನು ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ನೀಡಬೇಕೆಂಬ ಒತ್ತಡ ಬಿಜೆಪಿ ನಾಯಕರಿಂದ ಬಂತು. ಹಾಗಾಗಿ, ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನೀಡಲಾಯಿತು.
ಇನ್ನು ಬಿಜೆಪಿಯ ಕಥೆ ಇದಾದರೆ ಕಾಂಗ್ರೆಸ್ ಕಥೆಯೇ ಬೇರೆಯಾಗಿತ್ತು. ಬಿಜೆಪಿ ವಿರುದ್ಧ ಪ್ರಬಲ ಅಭ್ಯರ್ಥಿ ಹುಡುಕುವುದೇ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿತ್ತು. ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರವನ್ನು ಹೇಗಾದರೂ ಮಾಡಿ ಗೆಲ್ಲಲೇಬೇಕು ಎನ್ನುವ ಹಿನ್ನೆಲೆಯಲ್ಲಿ ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿಲು ಕಾಂಗ್ರೆಸ್ ತಯಾರಿ ನಡೆಸಿತ್ತು.
ಈ ಹಿಂದೆ ಕಾಂಗ್ರೆಸ್‌ಗೆ ದೊಡ್ಡ ಶಕ್ತಿಯಾಗಿದ್ದ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತೊರೆದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಸತೀಶ್ ಜಾರಕಿಹೊಳಿ ಒಬ್ಬರೆ ಈಗ ಕಾಂಗ್ರೆಸ್ನ ಪ್ರಬಲ ನಾಯಕರಾಗಿ ಉಳಿದುಕೊಂಡಿದ್ದಾರೆ. ಬೆಳಗಾವಿ ಲೋಕಸಭೆಯಲ್ಲಿ ಗೆಲ್ಲಬೇಕಾದರೆ ಪ್ರಬಲ ನಾಯಕನನ್ನೆ ಕಣಕ್ಕೆ ಇಳಿಸಬೇಕು ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಯಿತು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿತ್ತು. ಬಿಜೆಪಿ- ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡುಬಂದರೂ ಕೊನೆಗಳಿಗೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು.
ವಿಧಾನಸಭೆ ಉಪ ಚುನಾವಣೆ: ಮಸ್ಕಿಯಲ್ಲಿ ಪ್ರತಾಪಗೌಡಗೆ ಜಯ
ಮಸ್ಕಿಯಲ್ಲಿ ಇದುವರೆಗಿನ ಮೂರೂ ಚುನಾವಣೆಯಲ್ಲಿ ಗೆದ್ದವರು ಪ್ರತಾಪ್ ಗೌಡ ಪಾಟೀಲ್. 2008ರಲ್ಲಿ ಬಿಜೆಪಿಯಿಂದ ಮತ್ತು 2013, 2018ರಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಪ್ರತಾಪ್ ಪಾಟೀಲ್ ಜಯ ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಪ್ರತಾಪ್ ಗೌಡ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ವಿರುದ್ದ ಕೇವಲ 213 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಮಸ್ಕಿಯಲ್ಲಿ ಕಳೆದ ಬಾರಿ ಕಾಂಗ್ರೆಸ್‌ನಿಂದ ಗೆದ್ದ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದರು. ಹಾಗಾಗಿ, ಅಲ್ಲಿ ಉಪಚುನಾವಣೆ ನಡೆಯಿತು. ಬಿಜೆಪಿಯಲ್ಲಿದ್ದ ಬಸನಗೌಡ ತುರ್ವಿಹಾಳ ಕಾಂಗ್ರೆಸ್ ಸೇರ್ಪಡೆಯಾಗಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ವಿರುದ್ಧ ಬಸನಗೌಡ ತುರ್ವಿಹಾಳ ಅವರು 30,606 ಮತಗಳ ಅಂತರದೊಂದಿಗೆ ಗೆಲುವು ಸಾಧಿಸಿದ್ದರು.
ಬಸವಕಲ್ಯಾಣದಲ್ಲಿ ಬಂಡಾಯದ ನಡುವೆ ಶರಣು ಸಲಗಾರ್ಗೆ ಜಯ
ಇನ್ನು 2018ರಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಬಿ.ನಾರಾಯಣ ರಾವ್ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಶಾಕರಾಗಿದ್ದ ಬಿ.ನಾರಾಯಣರಾವ್ ಅವರು ಕೋವಿಡ್‌ನಿಂದ ನಿಧನರಾಗಿದ್ದರಿಂದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು.
ದಿವಂಗತ ನಾರಾಯಣರಾವ್ ಅವರ ಪತ್ನಿ ಮಾಲಾ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಅನುಕಂಪದಲ್ಲಿ ಗೆಲುವು ಸಾಧಿಸಬಹುದು ಎಂದು ನಂಬಿತ್ತು. ಆದರೆ, ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನುಕಂಪ ಮತ್ತು ಸ್ವಾಭಿಮಾನ ಕೆಲಸ ಮಾಡಲಿಲ್ಲ. ಬಿಜೆಪಿ ಟಿಕೆಟ್ ಸಿಗದ ಕಾರಣ ಬಂಡೆದ್ದು, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಪಕ್ಷೇತರರಾಗಿ ಸ್ಪರ್ಧಿಸಿದ್ದರೂ, ಬಿಜೆಪಿ ಅಭ್ಯರ್ಥಿ ಶರಣು ಸಲಗರ ಗೆಲುವು ಸಾಧಿಸಿದರು.
ಬಸವಕಲ್ಯಾಣದಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್‌ಗೆ ದುಬಾರಿಯಾಗಿ ಪರಿಣಮಿಸಿತು. ಇಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗಿ, ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣವಾಯಿತು. ಆಗ ಯಡಿಯೂರಪ್ಪ ಸಿಎಂ ಆಗಿದ್ದರು. ಮೂರು ಪಕ್ಷಗಳ ನಾಯಕರು ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.
ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಉಪ ಚುನಾವಣೆ: ಮಿಶ್ರಫಲ
ಬೆಳಗಾವಿ ಲೋಕಸಭೆ, ಬಸವಕಲ್ಯಾಣ ವಿಧಾನಸಭೆಯಲ್ಲಿ ಬಿಜೆಪಿ ವಶವಾದರೆ, ಮಸ್ಕಿ ವಿಧಾನಸಭೆ ' ಕೈ ' ವಶವಾಯಿತು. ಮಾಜಿ ಸಚಿವ ಸಿಎಂ ಉದಾಸಿ ಅಕಾಲಿಕ ನಿಧನದಿಂದ ಹಾನಗಲ್ ಹಾಗೂ ಜೆಡಿಎಸ್ ನ ಮಾಜಿ ಸಚಿವ ಎಂ.ಸಿ.ಮನಗೂಳಿ ನಿಧನದಿಂದ ಸಿಂದಗಿ ಉಪ ಚುನಾವಣೆ ಎದುರಾದವು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಮೊದಲ ಉಪ ಚುನಾವಣೆಗಳನ್ನು ಅವರು ಎದುರಿಸಿದರು.
ಅಕ್ಟೋಬರ್ 29 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಶಿವರಾಜ್ ಸಜ್ಜನರ್, ಕಾಂಗ್ರೆಸ್‌ನಿಂದ ಶ್ರೀನಿವಾಸ್ ಮಾನೆ ಹಾಗೂ ಜೆಡಿಎಸ್ನಿಂದ ನಿಯಾಜ್ ಶೇಕ್ ಸೇರಿದಂತೆ ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿ ಇದ್ದರು.
ಮತ್ತೊಂದೆಡೆ ಸಿಂದಗಿಯಲ್ಲಿ ಕಾಂಗ್ರೆಸ್‌ನಿಂದ ಮನಗೂಳಿ ಪುತ್ರ ಅಶೋಕ್ ಮನಗೂಳಿ ಸ್ಪರ್ಧೆ ನಡೆಸಿದ್ದಾರೆ. ಬಿಜೆಪಿಯಿಂದ ರಮೇಶ್ ಭೂಸನೂರ್ ಹಾಗೂ ಜೆಡಿಎಸ್ನಿಂದ ನಾಜಿಯಾ ಶಕೀಲಾ ಅಂಗಡಿ ಸೇರಿದಂತೆ ಒಟ್ಟು 6 ಅಭ್ಯರ್ಥಿಗಳು ಕಣದಲ್ಲಿದ್ದರು.
ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಪ್ರಯೋಗ ನಡೆಸಿದರು. ಆದರೆ, ಅದು ಫಲ ಕೊಡಲಿಲ್ಲ. ಜೆಡಿಎಸ್ ತೆಕ್ಕೆಯಲ್ಲಿದ್ದ ಸಿಂದಗಿ ಕ್ಷೇತ್ರ ಬಿಜೆಪಿ ಪಾಲಾಯಿತು. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರ ಸಂಬಂಧ ಜೆಡಿಎಸ್-ಕಾಂಗ್ರೆಸ್ ಮಧ್ಯ ಚುನಾವಣಾ ಪ್ರಚಾರದ ವೇಳೆ ವಾಕ್ಸಮರವೇ ನಡೆದಿತ್ತು.
ಈ ವರ್ಷ ಜುಲೈನಲ್ಲಿ ಬಿ.ಎಸ್ .ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಸವರಾಜ ಬೊಮ್ಮಾಯಿ ಅವರಿಗೆ ಈ ಉಪಚುನಾವಣೆಯು ಸವಾಲಾಗಿತ್ತು. ಅವರ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರಕ್ಕೆ ಪಕ್ಕದ ಕ್ಷೇತ್ರವಾಗಿರುವುದರಿಂದ ಹಾನಗಲ್ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಅವರಿಗೆ ಹೆಚ್ಚು ಮುಖ್ಯವಾಗಿತ್ತು.
ಕಾಂಗ್ರೆಸ್ ಉಪಚುನಾವಣೆಯಲ್ಲಿ ಗೆಲುವು ದಾಖಲಿಸುವ ಮೂಲಕ, ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ತನ್ನ ಸಿದ್ಧತೆಗಳಿಗೆ ವೇಗವನ್ನು ನೀಡಲು ಬಯಸಿತ್ತು. ಆದರೆ ಜೆಡಿಎಸ್ ಸಿಂದಗಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಮತ್ತು ಆ ಮೂಲಕ ತಾನು ಇನ್ನೂ ಭದ್ರ ನೆಲೆಯನ್ನು ಹೊಂದಿದೆ ಎಂದು ಸಾಬೀತುಪಡಿಸಲು ಪ್ರಯತ್ನಿಸಿತ್ತು.
ಚುನಾವಣೆಯಲ್ಲಿ ವೈಯಕ್ತಿಕ ವಾಕ್ಸಮರ
ಚುನಾವಣೆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಮಧ್ಯೆ ತೀವ್ರ ವಾಕ್ಸಮರ ನಡೆದಿತ್ತು. ಜೆಡಿಎಸ್ಗೆ ಮತ ಹಾಕಬೇಡಿ, ಆ ಪಕ್ಷ ಬಿಜೆಪಿಯ ಬಿ ಟೀಂ ಎಂದು ಸಿದ್ದರಾಮಯ್ಯ ಚುನಾವಣಾ ಪ್ರಚಾರವ ವೇಳೆ ಅಬ್ಬರಿಸಿದ್ದರು. ಇನ್ನು ಬಿಜೆಪಿ ಕುಮಾರಸ್ವಾಮಿಯ ದ್ವಿಪತ್ನಿತ್ವ ಪ್ರಶ್ನಿಸಿ ಟಾಂಗ್ ಕೊಟ್ಟಿತ್ತು. ನನ್ನ ವೈಯಕ್ತಿಕ ವಿಚಾರಕ್ಕೆ ಬಂದರೆ ನಿಮ್ಮ ಬಂಡವಾಳ ಬಯಲಿಗೆಳೆಯುವೆ ಎಂದು ಹೆಚ್ಡಿಕೆ ತಿರುಗೇಟು ನೀಡಿದ್ದರು.
ಆದರೆ, ಮತದಾರ ಷರಾ ಬರೆದಿದ್ದೇ ಬೇರೆ, ಸಿಂದಗಿ ಕ್ಷೇತ್ರ ಜೆಡಿಎಸ್ ಕೈತಪ್ಪಿ ಬಿಜೆಪಿ ಪಾಲಾಯಿತು. ಇನ್ನು ಬಿಜೆಪಿ ಅಬ್ಬರದ ಪ್ರಚಾರ ನಡೆಸಿದರೂ, ಹಾನಗಲ್ ಕ್ಷೇತ್ರ ಕಾಂಗ್ರೆಸ್ ವಶಕ್ಕೆ ತೆಗೆದುಕೊಂಡಿತು.
ಉಪಚುನಾವಣೆಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದಕ್ಕಿಂತ ಸೋಲು ಕಂಡಿದ್ದೇ ಹೆಚ್ಚು. ಅದರಲ್ಲೂ ಮತ ವಿಭಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಈ ಮಾತುಗಳಿಗೆ ನಿದರ್ಶನ ಎಂಬಂತೆ ಕಳೆದ ಎರಡು ವರ್ಷಗಳಲ್ಲಿ ಕೆಲವು ಉಪ ಚುನಾವಣೆಗಳು ರಾಜ್ಯದಲ್ಲಿ ನಡೆದರೂ, ಇದರಲ್ಲಿ ಒಂದೂ ಚುನಾವಣೆಯಲ್ಲಿಯೂ ಸಹ ಜೆಡಿಎಸ್ ಗೆಲುವು ಸಾಧಿಸಲಿಲ್ಲ. ಬದಲಿಗೆ ಮತಗಳ ವಿಭಜನೆಗೆ ಕಾರಣವಾಗಿತ್ತು.
ವಿಧಾನಪರಿಷತ್ ಚುನಾವಣೆ
ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 11 ಸ್ಥಾನಗಳನ್ನು ಪಡೆದುಕೊಂಡಿದೆ. ಜೆಡಿಎಸ್ ಮಾತ್ರ 2 ಸ್ಥಾನಕ್ಕಷ್ಟೇ ಸೀಮಿತವಾಯಿತು. ಇನ್ನು ಬೆಳಗಾವಿಯಲ್ಲಿ ಬಿಜೆಪಿಗೆ ಸೆಡ್ಡುಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದರು.
ಈ ಚುನಾವಣೆಯಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ, ಬಿಬಿಎಂಪಿ ಸದಸ್ಯರು ಯಾರೂ ಮತ ಹಾಕಿಲ್ಲ. ಗ್ರಾಮ ಪಂಚಾಯಿತಿ ಮತದಾರರು ಮತ್ತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೀಗೆ- ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತ ಹಾಕಿದ್ದಾರೆ. 5,728 ಗ್ರಾಮ ಪಂಚಾಯತಿಯ 91,000ಕ್ಕೂ ಹೆಚ್ಚು ಸ್ಥಾನಗಳ ಸದಸ್ಯರು ಈ ಚುನಾವಣೆಯಲ್ಲಿ ಮತ ಹಾಕಿದ್ದರು.
ಆದರೆ, ಆಡಳಿತಾರೂಢ ಬಿಜೆಪಿಗೆ ಈ ಗ್ರಾಮ ಪಂಚಾಯಿತಿ ಸದಸ್ಯರ ಮನಸ್ಸು ಗೆಲ್ಲಲು ಆಗಿಲ್ಲ ಎಂಬುದು ಈ ಚುನಾವಣೆಯಲ್ಲಿ ನಿಚ್ಚಳವಾಗಿದೆ. ಆದರೆ, ಬಿಜೆಪಿ ಈ ವಿಚಾರದಲ್ಲಿ ಇನ್ನು ಪಾಠ ಕಲಿತಿಲ್ಲ ಎಂಬುದಕ್ಕೆ ಇಂದಿನ ಫಲಿತಾಂಶವೇ ನಿದರ್ಶನವಾಗಿತ್ತು. ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್ ಅವರ ಸಹೋದರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹೋದರ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಎರಡನೇ ಮಗ - ಹೀಗೆ ಎಲ್ಲ ಪಕ್ಷಗಳಿಂದ ಕುಟುಂಬ ಸದಸ್ಯರು ಚುನಾವಣೆಗೆ ನಿಂತಿದ್ದರು.
ಕುಟುಂಬ ರಾಜಕಾರಣ ಮತ್ತು ಜಾತಿ ರಾಜಕೀಯದ ವಾಸನೆಯಲ್ಲಿ ಈ ಚುನಾವಣೆ ನಡೆದಿತ್ತು. ಆದರೆ, ಕಾಂಗ್ರೆಸ್ ಪಕ್ಷ ಹೇಳಿಕೊಂಡಿರುವಂತೆ ಇಂದಿನ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂಬುದಕ್ಕೆ ಯಾವುದೇ ನಿದರ್ಶನ ಸಿಕ್ಕಿಲ್ಲ. ಒಟ್ಟಾರೆ, 2021 ರಲ್ಲಿ ನಡೆದ ಉಪ ಚುನಾವಣೆಗಳು ಹಾಗೂ ವಿಧಾನಪರಿಷತ್ ಚುನಾವಣೆ ಯಾವ ಪಕ್ಷಕ್ಕೂ 2023 ರ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂಬುದು ಕಂಡು ಬಂದಿಲ್ಲ ಎನ್ನಬಹುದು.
ಇದನ್ನೂ ಓದಿ: ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ: ಸಿದ್ದರಾಮಯ್ಯ