ಬೆಂಗಳೂರು: ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ 12ನೇ ಆವೃತ್ತಿ ಫೆ. 26ರಿಂದ ಮಾರ್ಚ್ 4ರವರೆಗೆ ನಗರದಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲೋಗೋವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅನಾವರಣಗೊಳಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿನಿಮೋತ್ಸವ ನಡೆಸುತ್ತಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೈಜೋಡಿಸಿದೆ. ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಸಿನಿಮೋತ್ಸವ ರಾಜಾಜಿನಗರದಲ್ಲಿರುವ ಒರಾಯನ್ ಮಾಲ್‌ನಲ್ಲಿರುವ ಪಿವಿಆರ್‌ನಲ್ಲಿ 11 ಪರದೆಗಳಲ್ಲಿ ನಿನಿಮಾ ಪ್ರದರ್ಶನವಾಗಲಿದೆ ಎಂದರು. ಉದ್ಘಾಟನಾ ಸಮಾರಂಭ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಗಣ್ಯರು, ನಿರ್ದೇಶಕರ ಉಪಸ್ಥಿತಿಯಲ್ಲಿ ಫೆ. 26ರಂದು ಬುಧವಾರ ಸಂಜೆ ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ನಡೆಯಲಿದೆ. ಮಾರ್ಚ್ 4ರಂದು ಮುಕ್ತಾಯ ಸಮಾರಂಭ ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ನಡೆಯಲಿದೆ. ಏಳು ದಿನಗಳ ಕಾಲ ಸಿನಿಮೋತ್ಸವ ನಡೆಯಲಿದೆ. ವಿಶ್ವ ಸಿನಿಮಾ, ಚಿತ್ರ ಭಾರತಿ, ಭಾರತೀಯ ಚಿತ್ರಗಳ ಸ್ಪರ್ಧೆ ವಿಭಾಗ, ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಚಲನಚಿತ್ರ ವಿಮರ್ಶಕರ ಅಂತಾರಾಷ್ಟ್ರೀಯ ಒಕ್ಕೂಟ ಪ್ರಶಸ್ತಿ ಪಡೆದ ಚಿತ್ರಗಳು, ಏಷಿಯನ್ ಸಿನಿಮಾ, ನೆಟ್‌ಪ್ಯಾಕ್, ಆತ್ಮಚರಿತ್ರೆ ಆಧರಿತ ಚಿತ್ರಗಳು, ಉಪ ಭಾಷಾ ಚಿತ್ರಗಳು, ನಟ, ಕಲಾವಿದ, ತಂತ್ರಜ್ಞರು, ಸಿಂಹಾವಲೋಕನ, ವಿಶೇಷ ವಸ್ತು ಆಧಾರಿತ ಚಿತ್ರಗಳು, ಕಣ್ಮರೆಯಾದ ನಟ, ನಿರ್ದೇಶಕ ಸ್ಮರಣೆ, ಸಾಕ್ಷ್ಯಚಿತ್ರಗಳು ಇಲ್ಲಿ ಚಿತ್ರಲೋಕದ ವೈವಿಧ್ಯವನ್ನು ತೆರೆದಿಡಲಿದೆ ಎಂದರು. ಸಿನಿಮಾದ ಬೆಳವಣಿಗೆ ಕುರಿತಂತೆ ಸಂವಾದ, ಉಪನ್ಯಾಸ, ಚಲನಚಿತ್ರ ತಯಾರಿಕೆ, ಚಲನಚಿತ್ರ ಕಲೆ ರಸಗ್ರಹಣ ಶಿಬಿರ, ವಿಚಾರ ಸಂಕಿರಣ, ಕಾರ್ಯಾಗಾರ, ಮಾಸ್ಟರ್ ಕ್ಲಾಸ್ ವಿಭಾಗದಲ್ಲಿ ಸಿನಿಮಾ ತಜ್ಞರಿಂದ ಉಪನ್ಯಾಸ ಸಿನಿಮಾಸಕ್ತರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿವೆ. ವಿಶ್ವದ 50 ದೇಶಗಳಿಂದ ಸುಮಾರು 200 ಸಮಕಾಲೀನ ಚಲನಚಿತ್ರಗಳು ಸಿನಿಮೋತ್ಸವದಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿವೆ. ಪ್ರತಿನಿಧಿ ಶುಲ್ಕ ರೂ. 800 ಇರಲಿದೆ. ಸಿನಿಮಾ ವಿದ್ಯಾರ್ಥಿಗಳಿಗೆ ಹಾಗೂ ಚಲನಚಿತ್ರರಂಗದವರಿಗೆ ರೂ. 400 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಬೆಂಗಳೂರು ನಗರಕ್ಕೆ ವಿಶ್ವ ಸಿನಿಮಾವನ್ನು ಪರಿಚಯಿಸುವುದು ಚಲನಚಿತ್ರೋತ್ಸವದ ಮುಖ್ಯ ಉದ್ದೇಶ. ಹೀಗಾಗಿ ಇದನ್ನು 'ಬೆಂಗಳೂರಿನಲ್ಲಿ ಜಗತ್ತು' ಎಂದು ಬಣ್ಣಿಸಲಾಗುತ್ತದೆ. ಕನ್ನಡ ಸಿನಿಮಾ ಸೃಜನಶೀಲ ಮುಖಗಳನ್ನು ವಿಶ್ವದ ನಾನಾ ರಾಷ್ಟ್ರಗಳಿಗೆ ಪರಿಚಯಿಸುವ ಕೆಲಸವು ಈ ಮೂಲಕ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.