ಬಳ್ಳಾರಿ: ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆಯಬೇಕು. ತಾಂತ್ರಿಕ ತೊಂದರೆ ಇರುವುದರಿಂದ ಹೀಗಾಗಿದೆ. ನಾನು ಅಧಿಕಾರಿಗಳ ಜೊತೆ ಮಾತನಾಡಿ ಹಾಸ್ಟೆಲ್ಗೆ ಸರಿಯಾದ ರೀತಿಯಲ್ಲಿ ಆಹಾರ ಸರಬರಾಜು ಹಾಗೂ ಉತ್ತಮ ಗುಣಮಟ್ಟದ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಭರವಸೆ ನೀಡಿದರು.
ಪಿಡಿಎಸ್ ಅಕ್ಕಿ ಬೇಡ, ಉತ್ತಮ ಗುಣಮಟ್ಟದ ಅಕ್ಕಿ ನೀಡಿ ಎಂದು ಆಗ್ರಹಿಸಿ ಬಳ್ಳಾರಿ ನಗರದ ಪರಿಶಿಷ್ಟ ಪಂಗಡ ಹಾಸ್ಟೆಲ್(ಎಸ್.ಟಿ) ವಿದ್ಯಾರ್ಥಿಗಳು ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದರು. ಮಳೆಯನ್ನು ಲೆಕ್ಕಿಸದೆ ಪ್ರತಿಭಟಿಸಿದ ವಿದ್ಯಾರ್ಥಿಗಳು ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದರು.
ಸರ್ಕಾರದ ಆದೇಶದ ಪ್ರಕಾರ, ಜುಲೈ ಒಂದರಿಂದ ಸ್ಟೋರ್ ಅಕ್ಕಿಯನ್ನು ಊಟಕ್ಕೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಆಗಿದೆ. ಹೊಟ್ಟೆನೋವು, ಅಜೀರ್ಣ ಕಾಡುತ್ತಿದೆ. ಅಷ್ಟೇ ಅಲ್ಲ, ಹಾಸ್ಟೆಲ್ನಲ್ಲಿ ಮೂಲ ಸೌಲಭ್ಯಗಳ ಕೊರೆತೆ ಇದೆ. ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ಕರೆಂಟ್ ಹೋದಾಗ ಯುಪಿಎಸ್ ಹಾಕಿಸಲ್ಲ. ತಂದ ಹತ್ತಾರು ಬ್ಯಾಟರಿಗಳು ಹಾಗೆ ಮೂಲೆಯಲ್ಲಿ ಬಿದ್ದಿವೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸರ್ಕಾರದ ಕೆಲಸಗಳು ನಿಧಾನವಾಗಿ ನಡೆಯುತ್ತವೆ ಎಂದು ಉತ್ತರಿಸುತ್ತಾರೆ. ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದರು.
ಇಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಸಮಸ್ಯೆಗಳನ್ನು ಈಡೇರಿಸುವುದಾಗಿ ಹೇಳಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು. ದಯಮಾಡಿ ಸಹಕಾರ ನೀಡಿ. ಹತ್ತು ದಿನಗಳ ಕಾಲಾವಕಾಶ ನೀಡಿ. ಮುಂದಿನ ಗುರುವಾರ ಅಥವಾ ಶುಕ್ರವಾರದೊಳಗೆ ನಿರ್ಣಯಕ್ಕೆ ಬರುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಈ ಬಗ್ಗೆ ಮಾತನಾಡುತ್ತೇನೆ ಎಂದರು.
ಈ ವೇಳೆ ಮಾತನಾಡಿದ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಶ್ರೀರಾಮುಲು 100 ಪರ್ಸೆಂಟ್ ಸಚಿವರಾಗುತ್ತಾರೆ. ಯಡಿಯೂರಪ್ಪರಿಗೆ ಶ್ರೀರಾಮುಲು ಎಂದರೆ ಪ್ರಾಣ. ಅವರು ಏನು ಹೇಳಿದರೂ ಕೇಳುತ್ತಾರೆ. ಯಾಕಂದ್ರೆ, ಶ್ರೀರಾಮುಲು ಬಡವರ ಸಲುವಾಗಿ ಇರೋದು ಅಂತಾ ಅವರಿಗೆ ಗೊತ್ತು. ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿದರು. ತಾಲೂಕು ಪರಿಶಿಷ್ಟ ಪಂಗಡದ ಅಧಿಕಾರಿ ಗಾದಿ ಲಿಂಗಪ್ಪ, ಸಮಾಜ ಕಲ್ಯಾಣ ಅಧಿಕಾರಿ ರಾಜಪ್ಪ, ಪರಿಶಿಷ್ಟ ಪಂಗಡದ ಅಧಿಕಾರಿ ಶುಭ, ವಾಲ್ಮೀಕಿ ಸಮಾಜದ ಮುಖಂಡ ವಿ.ಕೆ ಬಸಪ್ಪ ಈ ವೇಳೆ ಹಾಜರಿದ್ದರು.