ಬಳ್ಳಾರಿ: ಜಿಲ್ಲೆಯ ವಿಶ್ವವಿಖ್ಯಾತ ಹಂಪಿ ವಿರೂಪಾಕ್ಷ ದೇಗುಲದ ಮುಖ್ಯ ಬಜಾರ್ನ ಸಾಲು ಮಂಟಪ ಸೇರಿದಂತೆ ಇನ್ನಿತರೆ ಸ್ಮಾರಕಗಳನ್ನು ನವೀಕರಣಗೊಳಿಸುವ ಸಲುವಾಗಿ ನೈಸರ್ಗಿಕ ಸಂಪನ್ಮೂಲಗಳುಳ್ಳ ವಾಟರ್ ಆ್ಯಂಡ್ ವೆದರ್ ಪ್ರೂಫ್ ಸಿಂಪಡಣೆ ಮಾಡಲಾಗುತ್ತಿದೆ.
ಹಂಪಿ ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಕಳೆದ ಜನವರಿ ತಿಂಗಳಿಂದಲೇ ಈ ಕಾರ್ಯವನ್ನು ಶುರುಮಾಡಿದೆ. ಸ್ಮಾರಕಗಳನ್ನು ನವೀಕರಣಗೊಳಿಸುವ ಜೊತೆ-ಜೊತೆಗೆ ಅವುಗಳ ಗುಣಮಟ್ಟವನ್ನೂ ಕಾಪಾಡುವ ಉದ್ದೇಶದೊಂದಿಗೆ ನೈಸರ್ಗಿಕ ಸಂಪನ್ಮೂಲಗಳನ್ನ ಸಂಗ್ರಹಿಸಿ, ಸಾಲು ಮಂಟಪದ ಸ್ಮಾರಕಗಳಿಗೆ ಲೇಪನ ಮಾಡಲಾಗುತ್ತಿದೆ.
ಪೂರ್ವಜರ ಕಾಲದಿಂದಲೂ ಬಳಕೆ ಮಾಡುತ್ತಿರುವ ನೈಸರ್ಗಿಕ ಸಂಪನ್ಮೂಲಗಳಾದ ಬೆಲ್ಲ, ಬಿಳಿಸುಣ್ಣ, ಕತ್ತಲೆಕಾಯಿ ಎಲೆ, ಖಡಕ್ ಕಾಯಿ ಪುಡಿಯನ್ನು ಮಿಶ್ರಣ ಮಾಡಿ ಅಂದಾಜು 15 ದಿನಗಳ ಕಾಲ ನೆನಸಿಡಲಾಗುತ್ತದೆ. ಬಳಿಕ ಅದನ್ನುಈ ಸಾಲು ಮಂಟಪದ ಮೇಲುಗಡೆ 25 ಸೆ. ಮೀ. ದಪ್ಪದಷ್ಟು ಲೇಪನ ಮಾಡಲಾಗುತ್ತೆ. ಇದರಿಂದ ಸಾಲು ಮಂಟಪದ ಸ್ಮಾರಕಗಳು ವಿಪರೀತ ಮಳೆ ಸುರಿದಾಗ ಸೋರಿಕೆಯಾಗೋದನ್ನು ತಡೆಗಟ್ಟಬಹುದು. ಅಲ್ಲದೆ, ಸ್ಮಾರಕಗಳ ಮೇಲೆ ಗಿಡ-ಗಂಟಿಗಳು ಬೆಳೆಯುವುದಿಲ್ಲ.
ಸ್ಮಾರಕಗಳ ರಕ್ಷಣೆಗೆ ವಾಟರ್ ಪ್ರೂಪ್ ಸಾಧನ: ವಾಟರ್ ಆ್ಯಂಡ್ ವೆದರ್ ಪ್ರೂಪ್ ಸಾಧನ ಅಳವಡಿಸುವ ಮುಖೇನ ಸಾಲು ಮಂಟಪದ ಸ್ಮಾರಕಗಳ ಮೇಲಿರುವ ಸವಕಳಿ, ಪಾಚಿಗಟ್ಟಿರೋದನ್ನ ಶುಚಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ವಿಜಯನಗರ ಕಾಲದ ಹಂಪಿಗೆ 600ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿಯೂ ಸೇರಿದೆ. ಪ್ರತಿವರ್ಷ ತುಂಗಭದ್ರಾ ಜಲಾಶಯ ತುಂಬಿದ ಬಳಿಕ ನದಿಗೆ ನೀರು ಬಿಟ್ಟಾಗ ಹಂಪಿಯ ಸ್ಮಾರಕಗಳು ಮುಳುಗಡೆ ಆಗುತ್ತವೆ. ಕಳೆದ ವರ್ಷ ಕೋದಂಡರಾಮ ದೇಗುಲ, ಪುರಂದರ ಮಂಟಪ ಸೇರಿ ವಿರುಪಾಪೂರ ದೇಗುಲದ ಹತ್ತಿರವೂ ಕೂಡ ಈ ನದಿ ನೀರು ಹರಿದುಬಂದಿತ್ತು. ಸಾಲು ಮಂಟಪದ ಹತ್ತಿರ 3 ಪಿಲ್ಲರ್ ನೆಲಕ್ಕುರುಳಿದ್ದವು. ಸ್ಮಾರಕಗಳನ್ನು ಯಥಾಸ್ಥಿತಿ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ವಾಟರ್ ಪ್ರೂಪ್ ಸಾಧನದ ಮೂಲಕ ಸ್ಮಾರಕಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆ ಮುಂದಾಗಿದೆ.
ಏನಿದು ವಾಟರ್ ಪ್ರೂಫ್ ಸಾಧನ?: ಇದು ನೈಸರ್ಗಿಕ ಸಂಪನ್ಮೂಲಗಳಿಂದ ತಯಾರಿಸಿದ ದ್ರಾವಣವಾಗಿದ್ದು, ಸ್ಮಾರಕಗಳ ಮೇಲೆ ವಿಶೇಷ ತಜ್ಞರ ತಂಡ ಇದನ್ನು ಸಿಂಪಡಣೆ ಮಾಡುತ್ತದೆ. ಈಗಾಗಲೇ ಪುರಂದರ ಮಂಟಪದಲ್ಲಿ ಶೇ.90ರಷ್ಟು ಸಿಂಪಡಣೆ ಕಾರ್ಯ ಮುಗಿದಿದೆ. ಅತ್ಯಂತ ಕೆಳಪದರದಂತ ದ್ರಾವಣ ಇದಾಗಿರುವುದರಿಂದ ಮೂಲ ಸ್ಮಾರಕಗಳಿಗೆ ಯಾವುದೇ ಧಕ್ಕೆಯಾಗದೇ, ಪಾಚಿ ಶುಚಿಗೊಳಿಸುತ್ತದೆ. ಮುಂಬರುವ ದಿನಗಳಲ್ಲಿ ಕಲ್ಲಿನ ರಥ, ವಿಜಯ ವಿಠಲ ದೇಗುಲ ಸೇರಿದಂತೆ ನಾನಾ ಸ್ಮಾರಕಗಳ ಮೇಲೆ ದ್ರಾವಣ ಸಿಂಪಡಣೆ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿಯೇ ವಿಶೇಷ ತಂತ್ರಜ್ಞರ ತಂಡ ಹಂಪಿಗೆ ಆಗಮಿಸಿದೆ.