ಬಳ್ಳಾರಿ: ಸುತ್ತಮುತ್ತಲಿನ ಕೈಗಾರಿಕೆಗಳಿಂದಾಗಿ ಪರಿಸರ ಮಾಲಿನ್ಯ, ಸಂಚಾರ ದಟ್ಟಣೆ ಮತ್ತು ಇನ್ನಿತರೆ ಅಗತ್ಯ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಭವಿಷ್ಯದ ಹಿತದೃಷ್ಟಿಯಿಂದ ತಮ್ಮನ್ನು ಸ್ಥಳಾಂತರ ಮಾಡಬೇಕೆಂದು ಸುಲ್ತಾನಪುರ ಗ್ರಾಮದ ಜನರು ಸರ್ಕಾರ ಹಾಗೂ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗ್ರಾಮಸ್ಥ ಕೆ. ಜಂಬಯ್ಯ, ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು, ತೋರಣಗಲ್ಲು ಗ್ರಾಮಪಂಚಾಯತ್ ಸುಲ್ತಾನಪುರ (ಯರಬನಹಳ್ಳಿ) ಗ್ರಾಮದ ಸುತ್ತಮುತ್ತಲು ಒಟ್ಟು 9 ಕಾರ್ಖಾನೆಗಳು ಇವೆ. ಈ ಕಾರ್ಖಾನೆಗಳಿಂದ ಪರಿಸರ ಮಾಲಿನ್ಯ, ಸಂಚಾರ ದಟ್ಟಣೆ, ಆರೋಗ್ಯ ಸಮಸ್ಯೆಗಳು ಸೇರಿದಂತೆ ಇನ್ನಿತರೆ ಹತ್ತಾರು ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ವಿಶೇಷ ಕೈಗಾರಿಕಾ ವಲಯವಾಗಿ ಗುರುತಿಸಿಕೊಂಡಿರುವ ಸುಲ್ತಾನಪುರ ಗ್ರಾಮವನ್ನು ಜನರ ಉತ್ತಮ ಆರೋಗ್ಯ ಹಾಗೂ ಭವಿಷ್ಯದ ಹಿತ ದೃಷ್ಟಿಯಿಂದ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರು.
ಕಳೆದ 2-3 ವರ್ಷಗಳಿಂದ ಗ್ರಾಮಪಂಚಾಯತ್, ಸಂಡೂರು ತಾಲೂಕು ಆಡಳಿತ, ಬಳ್ಳಾರಿ ಜಿಲ್ಲಾ ಆಡಳಿತ, ಕೈಗಾರಿಕಾ ಇಲಾಖೆ ಮತ್ತು ಸಚಿವರು, ಶಾಸಕರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಹಲವಾರು ಇಲಾಖೆಗಳಿಗೆ ಈಗಾಗಲೇ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನಗಳಾಗಿಲ್ಲ ಎಂದರು.
ಗ್ರಾಮದಲ್ಲಿ ಸುಮಾರು 150 ಕುಟುಂಬಗಳಿದ್ದು, 230 ಮನೆಗಳನ್ನು ನಿರ್ಮಿಸಿಕೊಂಡು 750 ಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದೇವೆ. ಗ್ರಾಮದಲ್ಲಿ 140 ಎಕರೆಗೂ ಹೆಚ್ಚು ರೈತರ ಕೃಷಿ ಜಮೀನು ಇದ್ದು, ಕೃಷಿ ಚಟುವಟಿಕೆ ಮಾಡುತ್ತಿದ್ದೇವೆ. ಇದು ಯಾವುದನ್ನು ಪರಿಶೀಲಿಸದೆ ಕಾರ್ಖಾನೆಗಳಿಗೆ ಪರವಾನಗಿ ನೀಡಿರುವ ರಾಜ್ಯ ಸರ್ಕಾರ ನಮ್ಮೆಲ್ಲರ ಜೀವನವನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿದರು.
ಗ್ರಾಮಸ್ಥರಾದ ಜಿ.ಗೋವಿಂದಪ್ಪ ಮಾತನಾಡಿ, ಮಾಲಿನ್ಯದಿಂದ ಕೃಷಿ ಚಟುವಟಿಕೆ ಮಾಡುತ್ತಿರುವ ರೈತರಿಗೆ ತಾವು ಬೆಳೆದ ಬೆಳೆಯಲ್ಲಿ ನಿರೀಕ್ಷಿತ ಇಳುವರಿ ಬರುತ್ತಿಲ್ಲ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮನ್ನು ಸ್ಥಳಾಂತರ ಮಾಡಿ ಎಂದು ಹೇಳಿದ್ರು.
ಇನ್ನು ಕಾರ್ಖಾನೆಗಳ ಮಾಲಿನ್ಯದಿಂದ ಗ್ರಾಮದ ಜನರು, ಜಾನುವಾರುಗಳು ಪದೇ ಪದೇ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಕೆಲವವನ್ನು ಸರ್ಕಾರ ಮಾಡಬೇಕಾಗಿದೆ ಎಂದು ಊರಿನ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು.