ಕೊಪ್ಪಳ, ಕಲಬುರಗಿ, ಬಳ್ಳಾರಿ, ಬೆಳಗಾವಿ, ರಾಯಚೂರು: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ನವ ವೃಂದಾವನದಲ್ಲಿನ ವ್ಯಾಸರಾಜ ಯತಿಗಳ ವೃಂದಾವನವನ್ನು ಧ್ವಂಸಗೊಳಿಸಿದ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯಿತು.
ಕೊಪ್ಪಳದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ನಗರದ ಬಸವೇಶ್ವರ ಸರ್ಕಲ್ನಿಂದ ಪ್ರಾರಂಭಗೊಂಡ ಮೆರವಣಿಗೆ ಜಿಲ್ಲಾಡಳಿತ ಭವನದವರೆಗು ಸಾಗಿತು. ಯಾರೋ ದುಷ್ಕರ್ಮಿಗಳು ನಿಧಿ ಆಸೆಯಿಂದ ನಮ್ಮ ಯತಿಗಳ ವೃಂದಾವನ ಧ್ವಂಸಗೊಳಿಸಿದ್ದಾರೆ. ಆ ದುಷ್ಕರ್ಮಿಗಳನ್ನು ಆದಷ್ಟು ಬೇಗ ಪತ್ತೆ ಮಾಡಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಲಬುರಗಿಯಲ್ಲೂ ಸಹ ನವ ವೃಂದಾವನ ಧ್ವಂಸ ಪ್ರಕರಣ ಖಂಡಿಸಿ ಶ್ರೀರಾಮಸೇನೆ, ಪೇಜಾವರ ಶ್ರೀ ಸೇನೆ, ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳ ಧ್ವಂಸ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ರೀತಿಯ ಘಟನೆಗಳು ಮರುಕರಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಒತ್ತಾಯಿಸಲಾಯಿತು.
ಇನ್ನು ಐತಿಹಾಸಿಕ ಪ್ರಸಿದ್ಧ ಹೊಸಪೇಟೆ ಹಾಗು ಆನೆಗುಂದಿಯಲ್ಲಿನ ಸ್ಮಾರಕಗಳನ್ನು ಪದೇ ಪದೇ ಧ್ವಂಸಗೊಳಿಸುವ ಪ್ರಕರಣಗಳು ನಡೆಯುತ್ತಲೇ ಇವೆ. ಕೂಡಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಳ್ಳಾರಿಯಲ್ಲಿ ಸಮಾನ ಮನಸ್ಕರ ವೇದಿಕೆ ಮುಖಂಡರಾದ ಸಾಲಿ ಸಿದ್ಧಯ್ಯ, ಸಂದೀಪ್ ಸಿಂಗ್ ಸೇರಿದಂತೆ ಇನ್ನಿತರೆ ಪದಾಧಿಕಾರಿಗಳು ಕಿಡಿಗೇಡಿಗಳ ವಿರುದ್ಧ ಘೋಷಣೆ ಕೂಗಿದರು.
ಬೆಳಗಾವಿಯಲ್ಲೂ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜದಿಂದ ನಗರದ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜ ಹಾಗೂ ಹರಿದಾಸ ಸೇವಾ ಸಮೀತಿ ಸೇರಿದಂತೆ ಇನ್ನಿತರೆ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ರಾಯಚೂರಿನಲ್ಲೂ ಸಹ ಜಿಲ್ಲಾ ಬ್ರಾಹ್ಮಣ ಮಹಾ ಸಭಾದಿಂದ ಪ್ರತಿಭಟನೆ ನಡೆಸಿದ್ದು, ಈ ವೇಳೆ ವ್ಯಾಸರಾಜರ ನವ ವೃಂದಾವನವನ್ನು ದುಷ್ಕರ್ಮಿಗಳು ಧ್ವಂಸ ಮಾಡುವ ಮೂಲಕ ವ್ಯಾಸರಾಜರಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಯಿತು. ಇಂತಹ ಘಟನೆಗಳು ಮರುಕಳಿಸದಂತೆ ದೇವಾಲಯಕ್ಕೆ ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.