ವಿಜಯನಗರ: ಸಾವಿರಾರು ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಹೊಸಪೇಟೆಯಲ್ಲಿ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ 7.4 ಅಡಿ ಎತ್ತರದ ಪುತ್ಥಳಿಯನ್ನು ನಟ ರಾಘವೇಂದ್ರ ರಾಜಕುಮಾರ್ ಅನಾವರಣಗೊಳಿಸಿದರು.
ಪುನೀತ್ ಅಭಿಮಾನಿಗಳು ಅಪ್ಪು ಭಾವಚಿತ್ರವಿದ್ದ ಟೀ ಶರ್ಟ್, ಧ್ವಜ, ಭಾವಚಿತ್ರ ಹಿಡಿದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಪ್ಪುಮತ್ತೆ ಹುಟ್ಟಿ ಬನ್ನಿ ಎಂಬ ಜಯಘೋಷ ಹಾಕಿದರು. ಇದೇ ವೇಳೆ, ಹೊಸಪೇಟೆ ಕುರಿತು ಪುನೀತ್ ಮಾತನಾಡಿದ ಆಡಿಯೋ, ವಿಡಿಯೋ ಪ್ರಸಾರ ಮಾಡಲಾಯಿತು.
ಪುತ್ಥಳಿ ಉದ್ಘಾಟನೆ ಮಾಡಿ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ಶಾರೀರಿಕವಾಗಿ ಪುನೀತ್ ನಮ್ಮಿಂದ ದೂರವಿರಬಹುದು ಆದರೆ, ಅಂತರಿಕವಾಗಿ ಅಭಿಮಾನಿಗಳ ಹೃದಯದಲ್ಲಿ ಅಪ್ಪು ಅಜರಾಮರ. ದೊಡ್ಡ ಮನೆ ಕುಟುಂಬಕ್ಕೂ ಹೊಸಪೇಟೆಗೂ ಅವಿನಾವಭಾವ ಸಂಬಂಧವಿದೆ. ಈಗಲೂ ರಾಜ್ ಕುಟುಂಬದ ಸಿನಿಮಾಗಳು ಹೊಸಪೇಟೆಯಲ್ಲಿ ಮೊದಲು ಪ್ರದರ್ಶನ ಕಂಡ್ರೆ ಯಶಸ್ವಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಅಲ್ಲದೇ, ಪುನೀತ್ ಆದರ್ಶವನ್ನು ಪ್ರತಿಯೊಬ್ಬ ಅಭಿಮಾನಿಗಳು ಪಾಲಿಸಬೇಕು ಎಂದು ಅವರು ಗೊಂಬೆ ಹೇಳುತೈತೆ ಹಾಡನ್ನು ಹಾಡುವ ಮೂಲಕ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದರು. ಈ ವೇಳೆ, ರಾಘವೇಂದ್ರ ರಾಜ್ ಕುಮಾರ್ ಪತ್ನಿ ಮಂಗಳಾ ಕಣ್ಣೀರು ಹಾಕಿದ್ರು.
ಕಾರ್ಯಕ್ರಮಕ್ಕೂ ಮುನ್ನ ಅಪ್ಪು ಪುತ್ಥಳಿಯನ್ನ ಹೊಸಪೇಟೆಯ ವಡಕರಾಯ ದೇವಸ್ಥಾನದಿಂದ ಮೆರವಣಿಗೆ ಮಾಡಲಾಯಿತು. ಗುರುಕಿರಣ್ ಸಂಗೀತ ರಸಮಂಜರಿ ಕಾರ್ಯಕ್ರಮದ ಜೊತೆ ಸ್ಥಳೀಯ ಅಪ್ಪು ಅಭಿಮಾನಿಗಳಿಗೆ ಹಾಡು ಹಾಡಲು ಮತ್ತು ನೃತ್ಯ ಮಾಡಲು ವೇದಿಕೆಯಲ್ಲಿ ಅವಕಾಶ ಮಾಡಲಾಗಿತ್ತು.
ಕುರ್ಚಿಗಳು ಪೀಸ್ ಪೀಸ್: ಅಪ್ಪು ಕಂಚಿನ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಅಭಿಮಾನಿಗಳು ಬಡಿದಾಡಿಕೊಂಡರು. ಕುರ್ಚಿಗಾಗಿ ಯುವಕ ಮಧ್ಯೆ ಗಲಾಟೆ ಶುರುವಾಗಿದ್ದು, ಬಳಿಕ ಕುರ್ಚಿಯಿಂದ ಹೊಡೆದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಬ್ಯಾರಿಕೇಡ್ ದಾಟಿಕೊಂಡು ಗಣ್ಯರ ಗ್ಯಾಲರಿಗೆ ನುಗ್ಗಿದ ಕೆಲವು ಅಭಿಮಾನಿಗಳು ಅಲ್ಲಿ ಸಹ ಚೇರ್ಗಳನ್ನು ಎತ್ತಿ ಬಿಸಾಡಿ ದಾಂಧಲೆ ಎಬ್ಬಿಸಿದರು. ಕೂಡಲೇ ಅಲರ್ಟ್ ಆದ ಪೊಲೀಸರು ಯುವಕರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಇದನ್ನೂ ಓದಿ: ಅವರು ಚಡ್ಡಿ ಸುಟ್ಕೊಂಡು ಇರಲಿ, ನಮ್ಮ ಹಳೇ ಚಡ್ಡಿ ಕಳಿಸಿ ಕೊಡುತ್ತೇವೆ: ಸಿ ಟಿ ರವಿ